PV Web Exclusive: ಪ್ರಕೃತಿಯೇ ಕೊಟ್ಟ ಕುಡಿಯುವ ನೀರಿನ ವರ ಕಸಿದುಕೊಂಡ ಹಿನ್ನೀರು!
ಯಾದಗಿರಿ: ಶಹಾಪುರ ತಾಲ್ಲೂಕಿನ ಅಣಬಿ ಗ್ರಾಮಸ್ಥರ ಪಾಲಿಗೆ ಅಮೃತಧಾರೆಯಾಗಿ ಇದ್ದದ್ದು ಇಲ್ಲಿನ ನೈಸರ್ಗಿಕವಾದ ನೀರಿನ ಸೆಲೆ (ಝರಿ). ಎಂಥಹುದ್ದೇ ಭೀಕರ ಬರಗಾಲ ಆವರಿಸಿರಲಿ, ಸುತ್ತಲಿನ ಹತ್ತಾರು ಹಳ್ಳಿಗಳಲ್ಲಿನ ಕೆರೆ–ಕುಂಟೆಗಳು, ಹಳ್ಳ–ಕೊಳ್ಳಗಳು ಒಣಗಿ ಹೋಗಿರಲಿ, ಸತತ ಎರಡ್ಮೂರು ವರ್ಷಗಳ ಕಾಲ ಮಳೆಯೇ ಇಲ್ಲದೆ ರೈತರು ಕಂಗಾಲಾಗಿರಲಿ, ಈ ನೈಸರ್ಗಿಕ ಸೆಲೆ ಮಾತ್ರ ಎಂದೂ ಬತ್ತಿ

ಯಾದಗಿರಿ: ಶಹಾಪುರ ತಾಲ್ಲೂಕಿನ ಅಣಬಿ ಗ್ರಾಮಸ್ಥರ ಪಾಲಿಗೆ ಅಮೃತಧಾರೆಯಾಗಿ ಇದ್ದದ್ದು ಇಲ್ಲಿನ ನೈಸರ್ಗಿಕವಾದ ನೀರಿನ ಸೆಲೆ (ಝರಿ). ಎಂಥಹುದ್ದೇ ಭೀಕರ ಬರಗಾಲ ಆವರಿಸಿರಲಿ, ಸುತ್ತಲಿನ ಹತ್ತಾರು ಹಳ್ಳಿಗಳಲ್ಲಿನ ಕೆರೆ–ಕುಂಟೆಗಳು, ಹಳ್ಳ–ಕೊಳ್ಳಗಳು ಒಣಗಿ ಹೋಗಿರಲಿ, ಸತತ ಎರಡ್ಮೂರು ವರ್ಷಗಳ ಕಾಲ ಮಳೆಯೇ ಇಲ್ಲದೆ ರೈತರು ಕಂಗಾಲಾಗಿರಲಿ, ಈ ನೈಸರ್ಗಿಕ ಸೆಲೆ ಮಾತ್ರ ಎಂದೂ ಬತ್ತಿರಲಿಲ್ಲ. ಬೇಸಿಗೆಯ ಬಿಸಿಲಿನ ಬೇಗೆಯಲ್ಲೂ ಇಲ್ಲಿ ಸದಾ ಸಿಹಿಯಾದ, ತಂಪಾದ ನೀರು ಝರಿಯಿಂದ ಉಕ್ಕುತ್ತಿತ್ತು.ಭೀಮಾ ನದಿ ತೀರದ ಬಲ ದಂಡೆಯ ಸುಣ್ಣದ ಕಲ್ಲುಗಳ ಹಾಸಿನ ನೆಲದ ಮೇಲಿರುವ ಅಣಬಿ ಗ್ರಾಮಕ್ಕೆ ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯೂ ಇದೆ. ತಲೆಮಾರುಗಳ ಕಾಲ ಗ್ರಾಮಸ್ಥರ ಬಾಯಾರಿಕೆ ತಣಿಸಿದ್ದ ನೈಸರ್ಗಿಕ ನೀರಿನ ಜೀವಸೆಲೆ ಈಗ ಸನ್ನತಿ ಬ್ರಿಡ್ಜ್ ಕಂ ಬ್ಯಾರೇಜ್ಗೆ ಸಿಲುಕಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಮುಳ್ಳು ಕಂಟಿಗಳ ನಡುವೆ, ನದಿಯ ಹಿನ್ನೀರಿನ ಕೆಸರಿನಲ್ಲಿ ಮುಳುಗಿರುವ ಜೀವಸೆಲೆಯನ್ನು ಹುಡುಕಾಡುವ ಸ್ಥಿತಿ ಗ್ರಾಮಸ್ಥರದ್ದಾಗಿದೆ.ವರ್ಷಪೂರ್ತಿ ಸಿಹಿ ನೀರನ್ನು ನೀಡುತ್ತಿದ್ದ ನೈಸರ್ಗಿಕ ಸೆಲೆಯು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದೆ. ಮುಳುಗಿರುವುದು ಮಾತ್ರವಲ್ಲದೇ ನದಿಯ ಕಲುಷಿತ ನೀರು ಸೆಲೆಯೊಳಗೆ ನುಗ್ಗಿ, ನೀರಿನ ಮಟ್ಟ ಇಳಿದಾಗ ಕುಡಿಯಲು ಯೋಗ್ಯವಲ್ಲದ ಮಟ್ಟಿಗೆ ಮಾರ್ಪಾಡು ಆಗುತ್ತಿರುತ್ತದೆ. ತಲೆಮಾರುಗಳಿಂದ ಇದೇ ಝರಿಯ ನೀರನ್ನು ನಂಬಿಕೊಂಡು ಕುಡಿಯುತ್ತಾ ಬಂದಿದ್ದವರಿಗೆ ಇದೀಗ ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ ಎನ್ನುತ್ತಾರೆ ಗ್ರಾಮಸ್ಥರು.ಹಿನ್ನೀರಿನಲ್ಲಿ ಮುಳುಗುವ ಪೂರ್ವದಲ್ಲಿನ ನೀರಿನ ಸೆಲೆಅಣಬಿ, ಹುರಸಗುಂಡಗಿ, ಶಿರವಾಳ, ಹೊಸೂರು, ಬಿರಾಳ, ರೋಜ ಸೇರಿದಂತೆ ಸುತ್ತಲಿನ ವ್ಯಾಪ್ತಿಯಲ್ಲಿ ಸುಣ್ಣದ ಕಲ್ಲಿನ ಬಂಡೆಗಳ ನೆಲ ಹಾಸಿದೆ. ಕಲ್ಲುಗಳ ಸಂದುಗಳಿಂದ ಹರಿದು ಬರುತ್ತಿದ್ದ ಈ ಝರಿಯ ನೀರು ತಿಳಿಯಾಗಿ, ತಣ್ಣಗೆ ಹಾಗೂ ರುಚಿಕರವಾಗಿದೆ. ಬಂಡೆಯ ಪದರಗಳಲ್ಲಿ ಇಂಗಿ ಹೊರಬರುವ ನೀರು ತನ್ನಷ್ಟಕ್ಕೆ ಶೋಧಿತವಾಗುತ್ತಿತ್ತು. ಯಾವುದೇ ಯಂತ್ರ, ವಿದ್ಯುತ್ ಇಲ್ಲದೆ ವರ್ಷವಿಡೀ ಹರಿಯುತ್ತಿದ್ದ ಈ ಝರಿಯಿಂದ ನೀರು ಒಯ್ಯಲು ಬೆಳಗಿನ ಜಾವದಿಂದಲೇ ಕೊಡ, ಬಿಂದಿಗೆ ಹಿಡಿದು ಸಾಲುಗಟ್ಟಿ ನಿಂತು ನೀರು ತರುತ್ತಿದ್ದೇವು. ಝರಿಯ ಮುಂಭಾಗದಲ್ಲಿ ಬಟ್ಟೆ ತೊಳೆಯುವುದು, ಜಾನುವಾರುಗಳಿಗೂ ನೀರು ಕುಡಿಸುತ್ತಿದ್ದೇವು. ಈ ಝರಿ ಕೇವಲ ನೀರಿನ ಮೂಲವಾಗಿರದೆ ಗ್ರಾಮದ ಬದುಕಿನ ಭಾಗವೇ ಆಗಿತ್ತು ಎಂದು ಗ್ರಾಮದ ಹಿರಿಯರು ನೆನೆಯುತ್ತಾರೆ.ಅಣಬಿ ಗ್ರಾಮದಲ್ಲಿ ನದಿಯ ಹಿನ್ನೀರಿನಲ್ಲಿ ಮುಳುಗಿದ ನೀರಿನ ಸೆಲೆ‘ಅಣಬಿ ಗ್ರಾಮದಲ್ಲಿನ ನೀರಿನ ಬುಗ್ಗೆ ಶಹಾಪುರ ಬೆಟ್ಟದ ಮೇಲಿರುವ ಮಂದಾಕಿನ ತೀರ್ಥಿಂದ ಬರುತ್ತದೆ ಎಂಬ ನಂಬಿಕೆ ಸ್ಥಳೀಯರಲ್ಲಿದೆ. ಅಣಬಿ ಮಾತ್ರವಲ್ಲದೇ ಶಿರವಾಳ, ಹೊಸೂರು ಸಮೀಪದ ಹಲವೆಡೆಗಳ ಸುಣ್ಣದ ಕಲ್ಲಿನಲ್ಲಿ ಇಂತಹ ಬುಗ್ಗೆಗಳು ಸಾಕಷ್ಟು ಕಾಣಸಿಗುತ್ತಿದ್ದವು. ಈ ಹಿಂದೆ ಬಾವಿ ತೋಡಿದ, ಕೊಳವೆ ಬಾವಿ ಕೊರೆಯಿಸಿದ ಕೆಲವರು ಬುಗ್ಗೆಗಳನ್ನು ಬಂದ್ ಮಾಡಿದ್ದರು. ಅದರಿಂದ ಬುಗ್ಗೆಗಳ ಅಸ್ತಿತ್ವಕ್ಕೆ ಧಕ್ಕೆಯಾಗಿದೆ. ಅಣಬಿ ಗ್ರಾಮದಲ್ಲಿ ಬಹಳ ಚೆನ್ನಾಗಿ ನೀರು ಬರುತ್ತಿದ್ದ ಝರಿಯೂ ಬ್ಯಾರೇಜ್ನ ಹಿನ್ನೀರಿಗೆ ಸಿಲುಕಿ ತನ್ನ ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ. ಅದನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕಿದೆ’ ಎನ್ನುತ್ತಾರೆ ಸಂಶೋಧಕ ಎಂ.ಎಸ್.ಶಿರವಾಳ.‘ಝರಿಯ ಸೆಲೆ ಸಂಪೂರ್ಣವಾಗಿ ನಾಶವಾಗಿಲ್ಲ. ಆದರೆ, ಹಿನ್ನೀರಿನ ಹೂಳು ತುಂಬಿಕೊಂಡು ನಾಶವಾಗುವ ಆತಂಕವಿದೆ. ಝರಿ ಹೊರಬರುವ ಜಾಗದಲ್ಲಿ ಕೊಳವೆ ಅಳವಡಿಸಿ, ನದಿ ನೀರು ಬೆರೆಯದಂತೆ ಪ್ರತ್ಯೇಕವಾಗಿ ನೀರನ್ನು ಮೇಲಕ್ಕೆ ತಂದರೆ ಮತ್ತೆ ಕುಡಿಯಲು ಯೋಗ್ಯವಾಗಿಸಬಹುದು. ಈ ಕುರಿತು ಶಾಸಕರಿಗೆ ಮನವಿ ಸಲ್ಲಿಸಿದರೂ ಇದುವರೆಗೆ ಸ್ಪಂದನೆ ಸಿಕ್ಕಿಲ್ಲ’ ಎನ್ನುತ್ತಾರೆ ಗ್ರಾಮಸ್ಥರಾದ ಗುರುಬಸವ.ಹಿನ್ನೀರಿನಲ್ಲಿ ಮುಳುಗುವ ಪೂರ್ವದಲ್ಲಿನ ನೀರಿನ ಸೆಲೆ‘ಕೆಲ ವರ್ಷಗಳ ಹಿಂದೆ ಝರಿಯ ಜತೆಗೆ ನದಿಯ ನೀರನ್ನೂ ಕುಡಿಯಲು ಬಳಸುತ್ತಿದ್ದೇವೆ. ಈಗ ನದಿ ಕಲುಷಿತವಾಗಿ ಕುಡಿಯಲು ಯೋಗ್ಯವಾಗಿಲ್ಲ. ಜಾನುವಾರುಗಳು, ಮನೆ ಬಳಕೆಗೆ ನದಿ ನೀರು ಬಳಸುತ್ತೇವೆ. ಆದರೆ, ಕುಡಿಯುವ ನೀರಿಗಾಗಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕೊರೆಯಿಸಿದ ಕೊಳವೆ ಬಾವಿಗಳನ್ನು ಅವಲಂಬಿಸಿದ್ದೇವೆ. ವಿದ್ಯುತ್ ಇದ್ದರೆ ಮಾತ್ರವೇ ಕೊಳವೆ ಬಾವಿಗಳಲ್ಲಿ ನೀರು ಬರುತ್ತದೆ. ಇಲ್ಲದಿದ್ದರೆ ಪರದಾಡುವಂತಹ ಸ್ಥಿತಿ ನಿರ್ಮಾಣ ಆಗುತ್ತದೆ. ಗ್ರಾಮದಲ್ಲಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ, ಝರಿಯ ನೀರು ಕುಡಿಯಲು ಬಳಸುವಂತಹ ಯೋಜನೆ ಒಂದನ್ನು ಜಿಲ್ಲಾಡಳಿತ ಕೈಗೆತ್ತಿಕೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ.ಅಣಬಿ ಗ್ರಾಮದಲ್ಲಿ ನದಿಯ ಹಿನ್ನೀರಿನಲ್ಲಿ ಮುಳುಗಿದ ನೀರಿನ ಸೆಲೆ