PV Web Exclusive: ಆಹಾ! ಇವು ಚಿಕ್ಕಬಳ್ಳಾಪುರಕ್ಕೆ ಹೆಸರು ತಂದ ತಿನಿಸುಗಳು
ಚಿಕ್ಕಬಳ್ಳಾಪುರ: ಈಶಾ ಯೋಗ ಕೇಂದ್ರ, ನಂದಿಗಿರಿಧಾಮ, ಭೋಗ ನಂದೀಶ್ವರ ದೇಗುಲ, ಸ್ಕಂದಗಿರಿ ಕಾರಣದಿಂದ ಚಿಕ್ಕಬಳ್ಳಾಪುರ ಈಗ ಪ್ರವಾಸಿಗರನ್ನು ಹೆಚ್ಚು ಸೆಳೆಯುತ್ತಿರುವ ಜಿಲ್ಲೆ.ಬೆಂಗಳೂರಿಗರು ದೊಡ್ಡ ಪ್ರಮಾಣದಲ್ಲಿ ವಾರಾಂತ್ಯದಲ್ಲಿ ಚಿಕ್ಕಬಳ್ಳಾಪುರದ ಪ್ರವಾಸಿ ತಾಣಗಳಿಗೆ ಎಡತಾಕುತ್ತಾರೆ. ಹೀಗೆ ಬರುವವರು ಚಿಕ್ಕಬಳ್ಳಾಪುರದಲ್ಲಿ ಸಿಗುವ ಬಗೆ ಬಗೆಯ ತಿನಿಸುಗಳಿಗೂ ಮನಸ

ಚಿಕ್ಕಬಳ್ಳಾಪುರ: ಈಶಾ ಯೋಗ ಕೇಂದ್ರ, ನಂದಿಗಿರಿಧಾಮ, ಭೋಗ ನಂದೀಶ್ವರ ದೇಗುಲ, ಸ್ಕಂದಗಿರಿ ಕಾರಣದಿಂದ ಚಿಕ್ಕಬಳ್ಳಾಪುರ ಈಗ ಪ್ರವಾಸಿಗರನ್ನು ಹೆಚ್ಚು ಸೆಳೆಯುತ್ತಿರುವ ಜಿಲ್ಲೆ.ಬೆಂಗಳೂರಿಗರು ದೊಡ್ಡ ಪ್ರಮಾಣದಲ್ಲಿ ವಾರಾಂತ್ಯದಲ್ಲಿ ಚಿಕ್ಕಬಳ್ಳಾಪುರದ ಪ್ರವಾಸಿ ತಾಣಗಳಿಗೆ ಎಡತಾಕುತ್ತಾರೆ. ಹೀಗೆ ಬರುವವರು ಚಿಕ್ಕಬಳ್ಳಾಪುರದಲ್ಲಿ ಸಿಗುವ ಬಗೆ ಬಗೆಯ ತಿನಿಸುಗಳಿಗೂ ಮನಸೋತಿದ್ದಾರೆ.ಹೌದು; ಚಿಕ್ಕಬಳ್ಳಾಪುರದ ದೊಮರೊಟ್ಟು, ದಿಲ್ ಪಸಂದ್, ಗರಿಗರಿ ದೋಸೆ, ಮೈಸೂರು ಪಾಕ್ ಚಿಕ್ಕಬಳ್ಳಾಪುರ ಜನರಿಗಷ್ಟೇ ರುಚಿಯಾಗಿಲ್ಲ ಹೊರಗಿನವರಿಗೂ ರುಚಿಸಿದೆ. ಚಿಕ್ಕಬಳ್ಳಾಪುರದಲ್ಲಿ ಪ್ರಮುಖ ಎನಿಸಿರುವ ತಿನಿಸುಗಳ ಬಗ್ಗೆ ವೆಬ್ ಎಕ್ಸ್ಕ್ಲೂಸಿವ್ನಲ್ಲಿ ಮಾಹಿತಿ ನೀಡಲಾಗಿದೆ.ಮಂಜುನಾಥ ಸ್ಟೀಟ್ ಸ್ಟಾಲ್ನ ದೊಮರೊಟ್ಟು: ಚಿಕ್ಕಬಳ್ಳಾಪುರ ನಗರಸಭೆ ಮುಂಭಾಗದಲ್ಲಿರುವ ಮಂಜುನಾಥ ಸ್ವೀಟ್ ಸ್ಟಾಲ್ಗೆ ಶತಮಾನ ಪೂರ್ಣವಾಗಿದೆ. ಈ ಅಂಗಡಿಯ ದೊಮರೊಟ್ಟು ಸಿಹಿಯ ರುಚಿಗೆ ಮನಸೋಲದವರಿಲ್ಲ. ದೊಮರೊಟ್ಟು ತಿನ್ನುವಾಗ ‘ಆಹಾ ಎಂತಹ ರುಚಿ’ ಎನ್ನುವ ಉದ್ಗಾರ ಖಚಿತ.ದೊಮರೊಟ್ಟು ಈ ಅಂಗಡಿಯಲ್ಲಿ ನಿತ್ಯವೂ ದೊರೆಯುವುದಿಲ್ಲ. ಪ್ರತಿ ಶನಿವಾರ ಮಾತ್ರ ಲಭ್ಯ. 1922ರಲ್ಲಿ ಈಗ ಅಂಗಡಿ ಇರುವ ಸ್ಥಳದಲ್ಲಿಯೇ ವೆಂಕಟಾಚಲಯ್ಯ ಅವರು ಮಂಜುನಾಥ ಸ್ವೀಟ್ ಸ್ಟಾಲ್ ಆರಂಭಿಸಿದರು. ಅವರ ನಂತರ ಪುತ್ರ ಗೋಪಾಲ್ ಅಂಗಡಿ ಮುನ್ನಡೆಸಿದರು. ಈಗ ಗೋಪಾಲ್ ಅವರ ಪುತ್ರ ಪ್ರಕಾಶ್ ಮತ್ತು ಪ್ರಕಾಶ್ ಅವರ ಸಹೋದರನ ಪುತ್ರ ಅಂಗಡಿ ನಡೆಸುತ್ತಿದ್ದಾರೆ. ಈ ಮೂಲಕ ಮಂಜುನಾಥ ಸ್ವೀಟ್ ಸ್ಟಾಲ್ ಅನ್ನು ನಾಲ್ಕನೇ ತಲೆಮಾರು ಮುನ್ನಡೆಸುತ್ತಿದೆ.ಮೊದಲಿಗೆ ವೆಂಕಟಾಚಲಯ್ಯ ಅವರು ಮೈಸೂರು ಪಾಕ್ ಮತ್ತು ದೊಮರೊಟ್ಟು ಸಿಹಿಯನ್ನು ಮಾತ್ರ ಮಾರಾಟ ಮಾಡುತ್ತಿದ್ದರು. ಈಗ ಇವುಗಳ ಜೊತೆಗೆ ತುಪ್ಪದ ಅವಲಕ್ಕಿ, ಓಂಪುಡಿ, ಬಾದುಶ, ಹಲ್ವ ಸೇರಿದಂತೆ ವಿವಿಧ ಸಿಹಿ ತಿನಿಸುಗಳು ಅಂಗಡಿಯಲ್ಲಿ ದೊರೆಯುತ್ತವೆ.ಆದರೆ ಇಲ್ಲಿನ ಮುಖ್ಯ ಆಕರ್ಷಣೆ ದೊಮರೊಟ್ಟು ಮತ್ತು ಮೈಸೂರ್ ಪಾಕ್. ಈ ಎರಡು ತಿನಿಸುಗಳಿಗಾಗಿ ಅಂಗಡಿಯನ್ನು ಗ್ರಾಹಕರು ಹುಡುಕಿ ಬರುವರು. ಈಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಂಗಡಿಯ ಬಗ್ಗೆ ವಿಡಿಯೊಗಳು ಸಹ ಹೆಚ್ಚು ಸದ್ದು ಮಾಡುತ್ತಿವೆ. ಹೊರ ಜಿಲ್ಲೆಯ ಜನರು ಸಹ ಗ್ರಾಹಕರಾಗಿದ್ದಾರೆ.ಸಿಹಿ ಬೂದುಗುಂಬಳ, ಕೋವಾ, ಸಕ್ಕರೆ, ತುಪ್ಪ, ದ್ರಾಕ್ಷಿ, ಗೋಡಂಬಿ, ಜಾಕಾಯಿ ಸೇರಿಸಿ ದೊಮರೊಟ್ಟು ಸಿದ್ಧಗೊಳಿಸುತ್ತೇವೆ. ಒಲೆ ಮೇಲೆಯೇ ಧಮ್ ಕಟ್ಟಬೇಕು. ಈ ಹಿಂದೆ ಈ ಸಿಹಿಯ ಬಗ್ಗೆ ಸ್ಥಳೀಯರು ಮತ್ತು ಅವರ ಸಂಬಂಧಿಕರಿಗೆ ಮಾತ್ರ ಗೊತ್ತಿತ್ತು. ಹಳೆ ಸಿಹಿ ತಿನಿಸು ಇದು. ಆದರೆ ಈಗ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚು ಜನರಿಗೆ ತಲುಪಿದೆ ಎನ್ನುತ್ತಾರೆ ಮಾಲೀಕರು.ವೆಂಕಟೇಶ್ವರ ಸ್ವೀಟ್ ಸ್ಟಾಲ್ನ ಮೈಸೂರು ಪಾಕ್: ಚಿಕ್ಕಬಳ್ಳಾಪುರ ಬಿಬಿ ರಸ್ತೆಯ ವೆಂಕಟೇಶ್ವರ ಸ್ವೀಟ್ ಸ್ಟಾಲ್ನ ಮೈಸೂರು ಪಾಕ್ ಗುಣಮಟ್ಟ, ರುಚಿಯ ಕಾರಣಕ್ಕೆ ಹೊರ ಜಿಲ್ಲೆ, ಹೊರ ರಾಜ್ಯಗಳಿಗೂ ರವಾನೆ ಆಗುತ್ತದೆ. ಕೆಲಸದ ನಿಮಿತ್ತ ಚಿಕ್ಕಬಳ್ಳಾಪುರಕ್ಕೆ ಬಂದವರು, ಬಂಧು ಬಳಗದವರ ಮನೆಗಳಿಗೆ ಬಂದವರು ಮರಳಿ ತಮ್ಮ ಊರುಗಳಿಗೆ ಹೋಗುವಾಗ ಇಲ್ಲಿಂದ ಮೈಸೂರು ಪಾಕ್ ಖರೀದಿಸುವರು. ವೆಂಕಟೇಶ್ವರ ಸ್ವೀಟ್ ಸ್ಟಾಲ್ಗೆ 80 ವರ್ಷಗಳ ಇತಿಹಾಸವಿದೆ. 80 ವರ್ಷಗಳ ಹಿಂದೆ ವೆಂಕಟರಾಯ ರಾಜು ಅವರು ಈ ಸಿಹಿ ತಿನಿಸಿನ ಅಂಗಡಿ ಆರಂಭಿಸಿದರು. ಈಗ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಅಂಗಡಿಯನ್ನು ನಡೆಸುತ್ತಿದ್ದಾರೆ.ಮೈಸೂರು ಪಾಕ್ ಜೊತೆಗೆ ಬಾದಾಮ್ ಹಲ್ವಾ, ದೊಮರೊಟ್ಟು ಸಹ ಇಲ್ಲಿ ಗಮನ ಸೆಳೆಯುವ ಮತ್ತು ಬೇಡಿಕೆಯುಳ್ಳ ಸಿಹಿ ತಿಂಡಿಗಳು. ಇಲ್ಲಿ ಸಹ ದೊಮರೊಟ್ಟು ಶನಿವಾರ ಮಾತ್ರ ದೊರೆಯುತ್ತದೆ. ಸಾಮಾನ್ಯವಾಗಿ ಸಿಹಿ ತಿಂಡಿ ಅಂಗಡಿಗಳ ವಿನ್ಯಾಸಕ್ಕೆ ಆಧುನಿಕ ಸ್ಪರ್ಶ ನೀಡುವರು. ಆದರೆ ಗುಣಮಟ್ಟದ ಮೈಸೂರ್ ಪಾಕ್ಗೆ ಹೆಸರಾದ ಈ ಅಂಗಡಿಯ ವಿನ್ಯಾಸವು ಇಂದಿಗೂ ಸಾಂಪ್ರದಾಯಿಕ ರೀತಿಯಲ್ಲಿಯೇ ಇದೆ. ಒಂದು ಕಡೆ ತಟ್ಟೆಯಲ್ಲಿರುವ ಮೈಸೂರು ಪಾಕ್ ಗ್ರಾಹಕರಿಂದ ಖಾಲಿ ಆಗುತ್ತಿದ್ದಾರೆ. ಮತ್ತೊಂದು ಕಡೆ ಬಿಸಿ ಬಿಸಿ ಮೈಸೂರು ಪಾಕ್ ಸಿದ್ಧವಾಗುತ್ತಿರುತ್ತದೆ.ಮೈಸೂರು ಪಾಕ್ ಪುಟ್ಟೂರಾವ್ ಹೋಟೆಲ್ನ ಗರಿಗರಿ ದೋಸೆ: ‘ಯಾವ ಹೋಟೆಲ್ನಲ್ಲಿ ದೋಸೆ ಚೆನ್ನಾಗಿ ಇರುತ್ತದೆ’–ಹೀಗೆ ನಗರಕ್ಕೆ ಬರುವ ಹೊಸಬರು ಚಿಕ್ಕಬಳ್ಳಾಪುರ ನಾಗರಿಕರನ್ನು ಕೇಳಿದರೆ, ಪುಟ್ಟೂರಾವ್ (ಅಭಿಷೇಕ್) ಹೋಟೆಲ್ನತ್ತ ಬೆರಳು ತೋರುವರು. ನಗರದ ವಿಶ್ವೇಶ್ವರಯ್ಯ ವೃತ್ತದಲ್ಲಿರುವ ಪುಟ್ಟೂರಾವ್ ಹೋಟೆಲ್ಗೆ 60 ವರ್ಷಗಳ ಇತಿಹಾಸವಿದೆ. ಪುಟ್ಟೂರಾವ್ ಮತ್ತು ವೆಂಕಟರಾಮ್ ಸಹೋದರರು 60 ವರ್ಷಗಳ ಹಿಂದೆ ಹೋಟೆಲ್ ಆರಂಭಿಸಿದರು. ಈಗ ಅವರ ಕುಟುಂಬದ ಸೀತಾರಾಮ್ ಮುನ್ನಡೆಸುತ್ತಿದ್ದಾರೆ. 30 ವರ್ಷಗಳ ಕಾಲ ಬಜಾರ್ ರಸ್ತೆಯಲ್ಲಿದ್ದ ಹೋಟೆಲ್ ಕಳೆದ 30 ವರ್ಷಗಳಿಂದ ವಿಶ್ವೇಶ್ವರಯ್ಯ ವೃತ್ತದಲ್ಲಿದೆ.ಪುಟ್ಟೂರಾವ್ ಹೋಟೆಲ್ನ ಗರಿಗರಿ ದೋಸೆಯುಟ್ಯೂಬ್ಗಳಲ್ಲಿ ಮತ್ತು ರೀಲ್ಸ್ಗಳಲ್ಲಿಯೂ ಸಹ ಪುಟ್ಟೂರಾವ್ ಹೋಟೆಲ್ನ ದೋಸೆಯ ಬಗ್ಗೆ ಮಾಹಿತಿಗಳಿವೆ. ಆಹಾರಕ್ಕೆ ಸಂಬಂಧಿಸಿದಂತೆ ವರದಿಗಳನ್ನು ಮಾಡುವ ಯೂಟ್ಯೂಬರ್ಗಳು ಪುಟ್ಟೂರಾವ್ ಹೋಟೆಲ್ನ ದೋಸೆಯನ್ನು ಮತ್ತಷ್ಟು ಪ್ರಸಿದ್ಧಗೊಳಿಸಿದ್ದಾರೆ. ಇದು ದೋಸೆ ಪ್ರಿಯರ ನೆಚ್ಚಿನ ಹೋಟೆಲ್ ಎನಿಸಿದೆ.ತಪ್ಪದ ಮಸಾಲೆ, ಖಾಲಿ ತುಪ್ಪ, ಖಾಲಿ ದೋಸೆ, ರವೆ ಇಡ್ಲಿ, ಮದ್ದೂರು ವಡೆ, ಇಡ್ಲಿ ವಡೆ, ಚಿತ್ರಾನ್ನ, ಚೌಚೌ ಬಾತ್–ಪುಟ್ಟೂರಾವ್ ಹೋಟೆಲ್ನ ಮೆನುವಿನಲ್ಲಿರುವ ತಿಂಡಿ ತಿನಿಸುಗಳಾಗಿವೆ. ತುಪ್ಪದ ಮಸಾಲೆ ದೋಸೆ, ಕಟ್ ಮಸಾಲೆ ಮತ್ತು ಬೆರಕೆ ಮಸಾಲೆ ದೋಸೆ, ಚಿತ್ರಾನ್ನ ಪ್ರಸಿದ್ಧವೇ ಆಗಿವೆ. ಇಲ್ಲಿ ಮಸಾಲೆ ದೋಸೆಯನ್ನು ಚಿತ್ರಾನ್ನದೊಂದಿಗೆ ತಿನ್ನುವುದಕ್ಕೆ ಬೆರಕೆ ಮಸಾಲೆ ಎನ್ನುವರು.ಚಿಕ್ಕಬಳ್ಳಾಪುರಕ್ಕೆ ಬರುವ ಹೊರ ಜಿಲ್ಲೆಯ ಜನರಷ್ಟೇ ಇಲ್ಲಿನ ದೋಸೆಗೆ ಅಭಿಮಾನಿಗಳಲ್ಲ ವಿದೇಶಿಯರೂ ಸಹ ಪುಟ್ಟೂರಾವ್ ಹೋಟೆಲ್ನ ದೋಸೆಗೆ ಮನಸೋತಿದ್ದಾರೆ. ಮುದ್ದೇನಹಳ್ಳಿಯ ಸತ್ಯಸಾಯಿ ಆಶ್ರಮಕ್ಕೆ ಬರುವ ವಿದೇಶಿಗರು ಖರೀದಿ ಮತ್ತಿತರ ಕಾರಣಕ್ಕೆ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡುವರು. ಹೀಗೆ ಬರುವ ವಿದೇಶಿಗರಿಗೆ ಪುಟ್ಟೂರಾವ್ ಹೋಟೆಲ್ ದೋಸೆ ಇಷ್ಟ. ಪುಟ್ಟೂರಾವ್ ಹೋಟೆಲ್ನಲ್ಲಿ ವಿದೇಶಿಯರು ಬೀರೇಶ್ವರ ಸಿಹಿ ತಿಂಡಿಯಲ್ಲಿ ನಾನಾ ತಿನಿಸು: ಚಿಕ್ಕಬಳ್ಳಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದ ಮಸೀದಿ ಪಕ್ಕದಲ್ಲಿರುವ ಬೀರೇಶ್ವರ ಸಿಹಿ ತಿನಿಸುಗಳ ಅಂಗಡಿ 36 ವರ್ಷಗಳಿಂದ ಜನರನ್ನು ಸೆಳೆಯುತ್ತಿದೆ. ಜಿಲ್ಲೆಯ ವಿವಿಧ ಕಡೆಗಳಿಗೆ, ಬೆಂಗಳೂರು, ಯಲಹಂಕ, ದೊಡ್ಡಬಳ್ಳಾಪುರ, ನೆಲಮಂಗಲ, ನೆರೆಯ ಆಂಧ್ರಪ್ರದೇಶದ ಹಿಂದೂಪುರ, ಅನಂತರಪುರಕ್ಕೆ ಇಲ್ಲಿನ ಸಿಹಿ ತಿಂಡಿಗಳು ರವಾನೆ ಆಗುತ್ತವೆ.1990ರಲ್ಲಿ ಬೀರಪ್ಪ ಈ ಅಂಗಡಿ ಆರಂಭಿಸಿದರು. 40ಕ್ಕೂ ಹೆಚ್ಚು ಬಗೆಯ ಸಿಹಿ ಮತ್ತು ಕಾರದ ತಿನಿಸುಗಳು ಇಲ್ಲಿ ದೊರೆಯುತ್ತವೆ. ಮೈಸೂರು ಪಾಕ್, ಬಾದಾಮ್ ಪುರಿ, ಜಹಾಂಗೀರ್, ದೊಮರೊಟ್ಟು, ದೂತ್ಪೇಡಾ, ವಿವಿಧ ಬಗೆಯ ಬರ್ಫಿಗಳು, ವಿಶೇಷ ಲಾಡು, ಬಾದಾಮ್ ಅಲ್ವ, ಐದಾರು ಬಗೆಯ ಮಿಕ್ಸ್ಚ್ಚರ್...ಹೀಗೆ ಈ ಅಂಗಡಿಯಲ್ಲಿ ತಯಾರಾಗುವ ಸಿಹಿ ತಿಂಡಿಗಳ ಪಟ್ಟಿ ಬೆಳೆಯುತ್ತದೆ.ವೆಂಕಟೇಶ್ವರ ಬೇಕರಿಯ ದಿಲ್ ಪಸಂದ್: ಚಿಕ್ಕಬಳ್ಳಾಪುರದ ಅಂಬೇಡ್ಕರ್ ವೃತ್ತದ (ಶಿಡ್ಲಘಟ್ಟ ಸರ್ಕಲ್) ವೆಂಕಟೇಶ್ವರ ಬೇಕರಿಯ ದಿಲ್ ಪಸಂದ್ ಖರೀದಿಗೆ ಜನರು ಸಾಲುಗಟ್ಟಿರುವರು. ಸಾಮಾಜಿಕ ಜಾಲತಾಣಗಳಲ್ಲಿಯೂ ಇಲ್ಲಿನ ದಿಲ್ ಪಸಂದ್ ಬಾರಿ ಪ್ರಚಾರ ಪಡೆದಿದೆ.