PV WEB Exclusive: ‘ಬೆಳಕಿನ ದಸರೆ’ ಅಂದು, ಇಂದು
ಮಡಿಕೇರಿ: ‘ಬೆಳಕಿನ ದಸರೆ’ ಎಂದೇ ಖ್ಯಾತಿವೆತ್ತ ಮಡಿಕೇರಿ ದಸರೆ ವರ್ಷದಿಂದ ವರ್ಷಕ್ಕೆ ವೈಭವೋಪೇತವಾಗಿ ಸಾಗುತ್ತಿದ್ದರೆ ಮತ್ತೊಂದೆಡೆ ಹಿರಿಯರು, ಮಹಿಳೆಯರು, ಮಕ್ಕಳಿಂದ ದೂರವಾಗುತ್ತಿದೆ. ದಸರೆಯ ಬೆಳಕನ್ನು ಕಣ್ತುಂಬಿಕೊಳ್ಳುವ ಅವಕಾಶದಿಂದ ಸ್ಥಳೀಯರು ವಂಚಿತರಾಗುತ್ತಿದ್ದಾರೆ. ಈಗ ಕೇವಲ ಹೊರ ಜಿಲ್ಲೆಯಿಂದ ಬಂದು ಮದ್ಯಸೇವಿಸಿ ಕುಣಿಯುವವರಿಗಷ್ಟೇ ಈ ದಸರೆ ನಡೆಯುತ್ತಿದೆ ಎಂದ

ಮಡಿಕೇರಿ: ‘ಬೆಳಕಿನ ದಸರೆ’ ಎಂದೇ ಖ್ಯಾತಿವೆತ್ತ ಮಡಿಕೇರಿ ದಸರೆ ವರ್ಷದಿಂದ ವರ್ಷಕ್ಕೆ ವೈಭವೋಪೇತವಾಗಿ ಸಾಗುತ್ತಿದ್ದರೆ ಮತ್ತೊಂದೆಡೆ ಹಿರಿಯರು, ಮಹಿಳೆಯರು, ಮಕ್ಕಳಿಂದ ದೂರವಾಗುತ್ತಿದೆ. ದಸರೆಯ ಬೆಳಕನ್ನು ಕಣ್ತುಂಬಿಕೊಳ್ಳುವ ಅವಕಾಶದಿಂದ ಸ್ಥಳೀಯರು ವಂಚಿತರಾಗುತ್ತಿದ್ದಾರೆ. ಈಗ ಕೇವಲ ಹೊರ ಜಿಲ್ಲೆಯಿಂದ ಬಂದು ಮದ್ಯಸೇವಿಸಿ ಕುಣಿಯುವವರಿಗಷ್ಟೇ ಈ ದಸರೆ ನಡೆಯುತ್ತಿದೆ ಎಂದು ಬಹುತೇಕ ಹಿರಿಯರು ನೋವು ತೋಡಿಕೊಳ್ಳುತ್ತಿದ್ದಾರೆ.ನಿಜಕ್ಕೂ ವಿಜಯದಶಮಿಯ ದಿನ ನಡೆಯುವ ಮಡಿಕೇರಿ ದಸರೆ ರಾಜ್ಯದ ಬೇರೆಲ್ಲಾ ಭಾಗಗಳಲ್ಲಿ ನಡೆಯುವ ದಸರೆಗಿಂತ ತೀರಾ ಭಿನ್ನ, ವಿಶೇಷ. ಇಲ್ಲಿ ಅಂದು ರಾತ್ರಿ ಇಡೀ ನಡೆಯುವ ದಶಮಂಟಪಗಳ ಶೋಭಾಯಾತ್ರೆಯನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳೂ ಸಾಲದು. ಅಷ್ಟರಮಟ್ಟಿಗೆ ಈ ದಸರೆ ಅತಿ ವಿಶೇಷವಾಗಿ ನಡೆಯುತ್ತದೆ. ಹಿಂದೆ ಇಲ್ಲಿನ ಹತ್ತೂ ಮಂಟಪಗಳ ಮೆರವಣಿಗೆಯನ್ನು ಜನರು ಕಣ್ತುಂಬಿಕೊಳ್ಳುತ್ತಿದ್ದರು. ಕಾಲಿನಿಂದ ಪಾದರಕ್ಷೆ ಕಳಚಿ ಮಂಟಪಗಳಲ್ಲಿದ್ದ ಕಲಾಕೃತಿಗಳಿಗೆ ಕೈಮುಗಿದು ಪ್ರಾರ್ಥಿಸುತ್ತಿದ್ದರು. ಜಯಕಾರ ಮೊಳಗಿಸುತ್ತಿದ್ದರು. ಒಂದರ ಹಿಂದೊಂದರಂತೆ ಸಾಲು ಸಾಲಾಗಿ ಈ ಮಂಟಪಗಳು ಬೆಳಕಿನ ಹಣತೆಗಳಂತೆ ಹೋಗುತ್ತಾ ಬನ್ನಿಮಂಟಪದಲ್ಲಿ ಬನ್ನಿ ಕಡಿಯುತ್ತಿದ್ದರು. ಆದರೆ, ಈಗ ಇವೆಲ್ಲವೂ ಸಂಪೂರ್ಣ ಮರೆಯಾಗಿದೆ ಎಂದು ಹಿರಿಯರಾದ ರಾಮರಾಜು ಹೇಳುತ್ತಾರೆ.ಈಗ ಇಲ್ಲಿ ನಡೆಯುವ ಹತ್ತು ಮಂಟಪಗಳ ಮೆರವಣಿಗೆ, ಅವುಗಳು ಪ್ರಸ್ತುತಪಡಿಸುವ ಕಥಾವಸ್ತುಗಳು, ಕಲಾಕೃತಿಗಳ ಚಲನವಲನ, ಬೆಳಕಿನ ವಿನ್ಯಾಸ, ಹೀಗೆ ಹೇಳುತ್ತಾ ಹೋದರೆ ಒಂದೊಂದು ಮಂಟಪವನ್ನು ಕುರಿತೇ ಪುಟಗಟ್ಟಲೆ ಬರೆಯಬಹುದು. ಈ ಮಂಟಪ ರಚನೆಯ ಹಿಂದೆ ಆಯಾಯ ಮಂಟಪ ಸಮಿತಿಯ ಸದಸ್ಯರ ಹಾಗೂ ನೂರಾರು ಕಾರ್ಮಿಕರ ತಿಂಗಳಗಟ್ಟಲೆ ಶ್ರಮವೂ ಇದೆ. ಕೇವಲ ಒಂದು ರಾತ್ರಿಗಾಗಿ ತಿಂಗಳುಗಟ್ಟಲೆ ಇವರು ಹಾಕುವ ಶ್ರಮ, ವ್ಯಯಿಸುವ ಹಣ, ಸಮಯ ಅಷ್ಟಿಷ್ಟಲ್ಲ. ಬಹುಶಃ ರಾಜ್ಯ ಮಾತ್ರವಲ್ಲ ದೇಶದ ಬೇರೆ ಯಾವುದೇ ಭಾಗದಲ್ಲೂ ಇಷ್ಟು ಶ್ರಮ ವಹಿಸಿ ದಸರೆ ಮಾಡುವುದು ಕಂಡು ಬರುವುದಿಲ್ಲ. ಆದರೆ, ಇಷ್ಟೆಲ್ಲ ಶ್ರಮವನ್ನು, ಇವರು ಮಾಡುವ ಮಂಟಪವನ್ನು ನೋಡುವ ಭಾಗ್ಯ ಇಲ್ಲಿನ ನಿವಾಸಿಗಳಿಗೆ ಅದರಲ್ಲೂ ಹಿರಿಯರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಲಭಿಸುತ್ತಿಲ್ಲ ಎಂಬುದು ಬಹುತೇಕ ಸ್ಥಳೀಯರ ಅಭಿಪ್ರಾಯ.ಮಂಟಪಗಳ ಮುಂದೆ ಪಾದರಕ್ಷೆ ಕಳಚಿ ಕೈಮುಗಿಯುವುದು ಇರಲಿ, ಕನಿಷ್ಠ ಪಕ್ಷ ನಿಲ್ಲುವುದಕ್ಕೂ ಆಗುವುದಿಲ್ಲ. ತಳ್ಳಾಟ, ನೂಕಾಟದಲ್ಲಿ ಕಾಲಿನಲ್ಲಿರುವ ಚಪ್ಪಲಿಯೂ ಎಲ್ಲೋ ಕಳಚಿ ಬಿದ್ದು ಹೋಗಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ವಿಜಯದಶಮಿಯ ರಾತ್ರಿಯ ನಂತರ ಬೆಳಿಗ್ಗೆ ಬಂದರೆ ನಗರದಲ್ಲಿ ರಾಶಿ ರಾಶಿ ಚಪ್ಪಲಿಗಳು ಬಿದ್ದಿರುವುದನ್ನು ಕಾಣಬಹುದು. ವಿಜಯದಶಮಿಯಂದು ಮೈಸೂರಿನ ದಸರೆ ಮುಗಿಯುತ್ತಿದ್ದಂತೆ ಯುವ ಸಮುದಾಯ ನೇರವಾಗಿ ಮಡಿಕೇರಿಗೆ ಲಗ್ಗೆ ಇಡುತ್ತಾರೆ. ಇಲ್ಲಿ ಮದ್ಯ ಮಾರಾಟ ನಿಷೇಧ ಇರುವುದರಿಂದ ಮೊದಲೇ ಹೊರಗಡೆಯಿಂದಲೇ ಮದ್ಯ ಖರೀದಿಸಿ ತರುತ್ತಾರೆ. ಇಲ್ಲಿ ಮದ್ಯ ಸೇವಿಸಿ ಹುಚ್ಚು ಬಂದವರಂತೆ ಅಲೆಯುತ್ತಾರೆ. ರಾತ್ರಿಯಾಗುತ್ತಿದ್ದಂತೆ ಇಲ್ಲಿ ಹಾಕುವ ಅಬ್ಬರದ ಧ್ವನಿವರ್ಧಕಗಳ ಮುಂದೆ ಮನಸೋ ಇಚ್ಛೆ ಕುಣಿಯುತ್ತಾರೆ. ರಸ್ತೆಯಲ್ಲಿ ಕುಡಿದು ತೂರಾಡುತ್ತಾರೆ. ಸಿಕ್ಕಸಿಕ್ಕವರ ಮೇಲೆ ಬೀಳುತ್ತಾರೆ. ಸ್ಥಳೀಯರ ಮೇಲೆ ಜಗಳಕ್ಕೂ ನಿಲ್ಲುತ್ತಾರೆ. ಈ ಸ್ಥಿತಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ.ಮತ್ತೊಂದೆಡೆ, ಇಲ್ಲಿ ನಡೆಯುವ ಅಬ್ಬರದ ಧ್ವನಿವರ್ಧಕಕ್ಕೆ ಇಲ್ಲಿನ ಹಿರಿಯರು, ಗರ್ಭಿಣಿಯರು, ಬಾಣಂತಿಯರು, ನವಜಾತಶಿಶುಗಳು ಅಕ್ಷರಶಃ ಬೆದರುತ್ತಾರೆ. ಈ ಧ್ವನಿವರ್ಧಕಗಳು ಸಾಗುವ ದಾರಿಯ ಇಕ್ಕೆಲಗಳಲ್ಲಿರುವ ಮನೆಗಳಲ್ಲಿರುವ ಇವರು ವಿಜಯದಶಮಿಯ ಹಿಂದಿನ ದಿನವೇ ಮನೆಗಳನ್ನು ತೊರೆಯುತ್ತಾರೆ. ಈ ಶಬ್ದವನ್ನು ಕೇಳಲಾರದೇ ಹೃದ್ರೋಗಿಗಳು, ವಿವಿಧ ಕಾಯಿಲೆಗಳಿಂದ ನರಳುವವರೂ ಊರು ತೊರೆಯುತ್ತಾರೆ. ಬೇರೆ ಊರುಗಳಲ್ಲಿರುವ ತಮ್ಮ ಸಂಬಂಧಿಕರ ಮನೆಗಳಲ್ಲಿದ್ದು, ದಸರೆ ಮುಗಿದ ಬಳಿಕ ಇಲ್ಲಿಗೆ ವಾಪಸ್ಸಾಗುತ್ತಾರೆ. ಈಗ ಇಲ್ಲಿನ ಜನರು ಈ ದಸರೆ ಮಾಡುವುದು ಯಾರಿಗಾಗಿ? ಎಂದು ಕೇಳುತ್ತಿದ್ದಾರೆ.ಮಂಟಪ ಅದ್ದೂರಿಯಾಗಿದೆ, ಅದರಲ್ಲಿರುವ ಕಥಾವಸ್ತುವೂ ಪುರಾಣದ್ದೇ ಆಗಿದೆ. ದೇವರ ಮಹಿಮೆಯನ್ನು ಬಿಟ್ಟು ಬೇರೆನ್ನನ್ನೂ ಮಂಟಪದಲ್ಲಿ ಪ್ರದರ್ಶಿಸುವುದಿಲ್ಲ. ದೇವ ರಾಕ್ಷಸರ ಕಾಳಗಗಳಂತೂ ಯಾವುದೇ ಸಿನಿಮಾವನ್ನೂ ಮೀರಿಸುವಂತೆ ನಡೆಯುತ್ತದೆ. ನೋಡುತ್ತಾ ನಿಂತರೆ ಮತ್ತಷ್ಟು ನೋಡಬೇಕೆನಿಸುತ್ತದೆ. ಆದರೆ, ಇಷ್ಟೆಲ್ಲವನ್ನು ಮದ್ಯಸೇವಿಸಿ ತೂರಾಡುವ ಹೊರ ಜಿಲ್ಲೆಯ ಯುವಸಮುದಾಯದ ಮಧ್ಯೆ ಇಲ್ಲಿನ ಹಿರಿಯರು, ಮಹಿಳೆಯರು, ಮಕ್ಕಳು ನೋಡುವುದಾದರೂ ಹೇಗೆ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ.ಎಷ್ಟೇ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ವಿವಿಧ ಪಕ್ಷಗಳ ಜನಪ್ರತಿನಿಧಿಗಳು ಇಲ್ಲಿಗೆ ಬಂದರು, ಇಲ್ಲಿ ಆಯ್ಕೆಯಾದರೂ ಯಾರೊಬ್ಬರೂ ಈ ವ್ಯವಸ್ಥೆಯನ್ನು ಸುಧಾರಿಸುವ ಕೆಲಸಕ್ಕೆ ಕೈ ಹಾಕಿಲ್ಲ. ಒಂದು ರೀತಿಯಲ್ಲಿ ದಿಕ್ಕು ತಪ್ಪಿದ ಹಾದಿಯಲ್ಲಿ ಬೆಳಕಿನ ದಸರೆ ಹೋಗುತ್ತಿದೆ ಎಂದು ಇಲ್ಲಿನ ಹಿರಿಯರಾದ ರಾಮಕೃಷ್ಣ ಬೇಸರ ವ್ಯಕ್ತಪಡಿಸುತ್ತಾರೆ. ಹೊರಗಡೆಯಿಂದ ಮದ್ಯಸೇವಿಸಿ ಬರುವವರಿಗೆ ಅಂದು ನಗರ ಪ್ರವೇಶವನ್ನು ನಿರ್ಬಂಧಿಸಬೇಕು. ಅದಕ್ಕಾಗಿ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ರೂಪಿಸಬೇಕು. ಇಡೀ ಕೊಡಗು ಜಿಲ್ಲೆ ಮಾತ್ರವಲ್ಲ ಹೊರ ಜಿಲ್ಲೆಗಳಲ್ಲೂ ಮದ್ಯಮಾರಾಟ ನಿಷೇಧಿಸಬೇಕು. ಆಗ ಒಂದಿಷ್ಟು ಸುಧಾರಣೆ ಕಾಣಬಹುದು ಎಂದು ಕೆಲವರು ಅಭಿಪ್ರಾಯಪಡುತ್ತಾರೆ.ದಸರೆಯಲ್ಲಿ ಹಾಕುವ ಧ್ವನಿವರ್ಧಕವು ಕೇವಲ ಹಿರಿಯರಿಗೆ, ಮಹಿಳೆಯರಿಗೆ, ನವಜಾತ ಶಿಶುಗಳಿಗೆ ಮಾತ್ರವೆ ತೊಂದರೆ ಕೊಡುತ್ತಿಲ್ಲ. ಇವರೊಂದಿಗೆ ಸಾಕುಪ್ರಾಣಿಗಳಿಗೆ, ಅಕ್ವೇರಿಯಂನಲ್ಲಿರುವ ಮೀನುಗಳಿಗೆ, ಅಷ್ಟೇ ಏಕೆ ಮನೆಗಳಲ್ಲಿರುವ ಗಾಜುಗಳೂ ಈ ಶಬ್ದಕ್ಕೆ ಒಡೆದು ಹೋಗಿವೆ ಎಂದು ಮಹದೇವಪೇಟೆಯ ಸರೋಜಾ ಹೇಳುತ್ತಾರೆ.ಧ್ವನಿವರ್ಧಕಗಳ ಶಬ್ದಕ್ಕೆ ನಿಯಂತ್ರಣ ಹೇರಲೇಬೇಕು. ಒಂದರ ಮೇಲೊಂದರಂತೆ ವಿದ್ಯುತ್ ತಂತಿಯವರೆಗೂ ಧ್ವನಿವರ್ಧಕಗಳನ್ನು ಇಟ್ಟಿಗೆಗಳಂತೆ ಜೋಡಿಸುವ ಪರಿಪಾಠ ಕೈಬಿಡಬೇಕು. ಇವುಗಳಿಗೆ ಲಕ್ಷಾಂತರ ಹಣ ವ್ಯಯಿಸುವ ಬದಲಿಗೆ ಬೇರೆ ಬೇರೆ ಊರುಗಳು, ಇಲ್ಲಿರುವ ಕಲಾವಿದರನ್ನು, ಕಲಾತಂಡಗಳನ್ನು ಕರೆಸಬೇಕು. ಮೈಸೂರಿನ ಜಂಬೂಸವಾರಿಯಲ್ಲಿ ಸಾಗುವ ಕಲಾತಂಡಗಳಂತೆ ಇಲ್ಲೂ ಕಲಾತಂಡಗಳನ್ನು ನಿಯೋಜಿಸಿದರೆ ದಸರೆಗೆ ಸಾಂಸ್ಕೃತಿಕ ಮಹತ್ವ ಬರುತ್ತದೆ ಎಂದು ಹಿರಿಯರಾದ ಕೃಷ್ಣಮೂರ್ತಿ ಅಭಿಪ್ರಾಯಪಡುತ್ತಾರೆ.ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಈ ಬಾರಿ ಶಬ್ದಕ್ಕೆ ಸಂಬಂಧಿಸಿದಂತೆ ನಿಯಮ ಮೀರಿದರೆ ಪ್ರಕರಣ ದಾಖಲಿಸುವುದು ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ. ಮಹಿಳೆಯ ರಕ್ಷಣೆಗಾಗಿಯೇ ಪ್ರತ್ಯೇಕವಾದಿ ಜಂಬೊ ಪಡೆ ರಚಿಸಿದ್ದಾರೆ. ಈ ಬಾರಿ ‘ಬೆಳಕಿನ ದಸರೆ’ ಹೇಗೆ ನಡೆಯುತ್ತದೆಯೋ ಕಾದು ನೋಡಬೇಕಿದೆ.