PV Web Exclusive: ಕೊಡಗಿನತ್ತ ಧಾವಿಸುತ್ತಿದೆ ಕೇಬಲ್ ಕಾರ್...!
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಈಗ ಕೇಬಲ್ ಕಾರ್ (ರೋಪ್ ವೇ) ಸದ್ದು ಜೋರಾಗಿ ಕೇಳುತ್ತಿದೆ. ಇದುವರೆಗೂ ಬರುತ್ತದೆ, ಬರಲಿದೆ ಎಂಬ ಮಾತುಗಳಷ್ಟೇ ಆಗೊಮ್ಮೆ ಈಗೊಮ್ಮೆ ಕೇಳಿ ಬರುತ್ತಿದ್ದವು. ಆದರೆ, ಈಗ ಸದ್ದಿಲ್ಲದೇ ಯೋಜನೆಯೂ ತಯಾರಾಗಿದೆ. ಅರಣ್ಯ ಇಲಾಖೆ ಅನುಮತಿಗಾಗಿ ಪರಿವೇಶ್ ತಂತ್ರಾಂಶದಲ್ಲೂ ಅರ್ಜಿಸಲ್ಲಿಕೆಯಾಗಿದೆ. ಅನುಮತಿ ದೊರೆಯುತ್ತಿದ್ದಂತೆ ಕಾಮಗಾರಿ ಆರಂಭಿಸಲು ಪ್

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಈಗ ಕೇಬಲ್ ಕಾರ್ (ರೋಪ್ ವೇ) ಸದ್ದು ಜೋರಾಗಿ ಕೇಳುತ್ತಿದೆ. ಇದುವರೆಗೂ ಬರುತ್ತದೆ, ಬರಲಿದೆ ಎಂಬ ಮಾತುಗಳಷ್ಟೇ ಆಗೊಮ್ಮೆ ಈಗೊಮ್ಮೆ ಕೇಳಿ ಬರುತ್ತಿದ್ದವು. ಆದರೆ, ಈಗ ಸದ್ದಿಲ್ಲದೇ ಯೋಜನೆಯೂ ತಯಾರಾಗಿದೆ. ಅರಣ್ಯ ಇಲಾಖೆ ಅನುಮತಿಗಾಗಿ ಪರಿವೇಶ್ ತಂತ್ರಾಂಶದಲ್ಲೂ ಅರ್ಜಿಸಲ್ಲಿಕೆಯಾಗಿದೆ. ಅನುಮತಿ ದೊರೆಯುತ್ತಿದ್ದಂತೆ ಕಾಮಗಾರಿ ಆರಂಭಿಸಲು ಪ್ರವಾಸೋದ್ಯಮ ಇಲಾಖೆ ತುದಿಗಾಲ ಮೇಲೆ ನಿಂತಿದೆ.ಇದು ಉತ್ತರ ಕೊಡಗಿನ ಪ್ರವಾಸೋದ್ಯಮಿಗಳಲ್ಲಿ ಆಶಾಭಾವನೆಗಳನ್ನು ಗರಿಗೆದರಿಸಿದ್ದರೆ, ಪರಿಸರವಾದಿಗಳಲ್ಲಿ ಆತಂಕ ಮೂಡಿಸಿದೆ.ಸದ್ಯ, ಉತ್ತರ ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಳಿ ಜಲಪಾತದ ಬಳಿ ಈ ಕೇಬಲ್ ಕಾರ್ ಅಥವಾ ರೋಪ್ ವೇ ಮಾಡುವುದಕ್ಕೆ ₹550 ಕೋಟಿ ಮೊತ್ತದ ಪ್ರಸ್ತಾವ ತಯಾರಾಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಈಗಾಗಲೇ ‘ರೈಟ್ಸ್’ ಎಂಬ ಸಂಸ್ಥೆಗೆ ವಹಿಸಲಾಗಿದೆ. ಮೊನ್ನೆಯಷ್ಟೇ ಪ್ರವಾಸೋದ್ಯಮ ಖಾತೆ ಸಚಿವ ಕೆ.ಜೆ.ಜಾರ್ಜ್ ಆದಷ್ಟು ಶೀಘ್ರ ಯೋಜನೆಯನ್ನು ಕಾರ್ಯಗತ ಗೊಳಿಸಿ ಎಂದು ಸೂಚನೆ ನೀಡಿದ್ದಾರೆ. ಅರಣ್ಯ ಇಲಾಖೆ ಅನುಮತಿ ನೀಡುತ್ತಿದ್ದಂತೆ ಕಾಮಗಾರಿ ಆರಂಭವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.ಸೋಮವಾರಪೇಟೆಯಿಂದ ಸುಬ್ರಹ್ಮಣ್ಯದವರೆಗೂ ಕೇಬಲ್ ಕಾರ್ ಇರಲಿದೆ ಎಂಬ ಊಹಾಪೋಹಾಗಳಿಗೆ ತೆರೆ ಬಿದ್ದಿದೆ. ಕೇವಲ ಮಲ್ಲಳ್ಳಿ ಜಲಪಾತದ ಒಂದು ಬೆಟ್ಟದಲ್ಲಿ ಮೇಲಿಂದ ಕೆಳಗೆ, ಕೆಳಗಿನಿಂದ ಮೇಲಕ್ಕೆ ಸುಮಾರು ಒಂದೂವರೆ ಕಿ.ಮೀ ಉದ್ದದಷ್ಟು ವ್ಯಾಪ್ತಿಯಲ್ಲಿ ಮಾತ್ರವೇ ಈ ರೋಪ್ವೇ ಇರಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಸ್ಪಷ್ಟಪಡಿಸಿದೆ.ಕೇಬಲ್ ಕಾರಿನಿಂದ ಆಗುವ ಲಾಭಗಳು:ಕೇಬಲ್ ಕಾರ್ನಿಂದ ಅನೇಕ ಲಾಭಗಳು ಆಗುತ್ತವೆ ಎಂದು ಇದರ ಪರವಾಗಿರುವವರು ಹೇಳುತ್ತಾರೆ. ಮುಖ್ಯವಾಗಿ, ಪ್ರವಾಸೋದ್ಯಮದ ಬೆಳವಣಿಗೆ ಆಗತ್ತದೆ ಎಂಬುದು ಅವರ ಪ್ರತಿಪಾದನೆ. ಈಗ ಕೊಡಗಿನಲ್ಲಿ ಪ್ರವಾಸಿ ತಾಣಗಳೆಂದರೆ ಹಿಂದೆ ಎಷ್ಟಿತ್ತೋ ಅಷ್ಟೇ ಇದೆ. ಹೊಸದಾದ ಪ್ರವಾಸಿತಾಣಗಳು ಪಟ್ಟಿಯಲ್ಲಿಲ್ಲ. ಈಗ ಕೇಬಲ್ ಕಾರ್ ಮಾಡಿದರೆ ಅದು ಹೊಸ ಪ್ರವಾಸಿತಾಣವಾಗಲಿದೆ. ಇದರಿಂದ ಪ್ರವಾಸಿಗರು ಹೆಚ್ಚು ಹೆಚ್ಚು ಭೇಟಿ ನೀಡುತ್ತಾರೆ. ಸಹಜವಾಗಿಯೇ ಪ್ರವಾಸೋದ್ಯಮ ಕ್ಷೇತ್ರ ಬೆಳವಣಿಗೆ ಕಾಣಲಿದೆ ಎಂದು ಹೇಳುತ್ತಾರೆ. ವಿಶೇಷವಾಗಿ, ಸೋಮವಾರಪೇಟೆ ತಾಲ್ಲೂಕಿಗೆ ಪ್ರವಾಸಿಗರು ಹೆಚ್ಚು ಭೇಟಿ ನೀಡುತ್ತಾರೆ. ಇದರಿಂದ ಕೊಡಗಿನ ಕೆಲವೇ ಕೆಲವು ಪ್ರವಾಸಿ ತಾಣಗಳ ಮೇಲಿನ ಪ್ರವಾಸಿಗರ ಒತ್ತಡ ಕೊಂಚ ಕಡಿಮೆಯಾಗಲಿದೆ. ಹೆಚ್ಚು ಪ್ರವಾಸಿಗಳು ಬರುವುದರಿಂದ ಸಹಜವಾಗಿಯೇ ಆ ಭಾಗದ ವಾಣಿಜ್ಯ, ವಹಿವಾಟುಗಳು ಗರಿಗೆದರುತ್ತವೆ. ಅಂಗಡಿ, ಮುಂಗಟ್ಟುಗಳು, ಹೋಟೆಲ್ಗಳು ತಲೆ ಎತ್ತುತ್ತವೆ. ಸಹಜವಾಗಿಯೇ ಸ್ಥಳೀಯರಿಗೂ ಉದ್ಯೋಗ, ಸ್ವಯಂಉದ್ಯೋಗಗಳು ದೊರೆಯುತ್ತವೆ.ಕೇಬಲ್ ಕಾರಿನಿಂದ ಆಗುವ ಅಪಾಯಗಳು:ಕೇಬಲ್ ಕಾರ್ನಿಂದ ಎಷ್ಟು ಒಳಿತಾಗುತ್ತದೋ ಅಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚೇ ಅಪಾಯವೂ ಆಗುತ್ತದೆ ಎಂದು ಪರಿಸರವಾದಿಗಳು ಪ್ರತಿಪಾದಿಸುತ್ತಾರೆ.ಕೇಬಲ್ ಕಾರ್ ಆ ಭಾಗದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಬಲ್ಲುದು. ವಿಶೇಷವಾಗಿ, ಆ ಭಾಗದಲ್ಲಿ ಅಪಾರವಾದ ಜೀವವೈವಿಧ್ಯ ಇದೆ. ಜನರ, ಪ್ರವಾಸಿಗರ ಒತ್ತಡ ಇಲ್ಲದೇ ಸದ್ಯ ಆ ಸಕಲ ಜೀವರಾಶಿಗಳೂ ಆರಾಮವಾಗಿವೆ. ಅಡಿಗಟ್ಟಲೆ ಎರೆಹುಳ ಬೆಳೆಯುತ್ತದೆ, ಅಪರೂಪದ ಜೀವಜಂತುಗಳು, ಪಕ್ಷಿ, ಪ್ರಾಣಿಗಳು ಇಲ್ಲಿವೆ. ಒಂದು ವೇಳೆ ಕೇಬಲ್ ಕಾರ್ ಆರಂಭವಾದರೆ ಈ ಎಲ್ಲ ಜೀವವೈವಿಧ್ಯಕ್ಕೂ ಧಕ್ಕೆಯಾಗುತ್ತದೆ.ಈ ಕೇಬಲ್ ಕಾರ್ ಇಡೀ ಪರಿಸರವನ್ನೇ ಕಲಕಿ ಬಿಡುತ್ತದೆ. ಕಾಲಕ್ರಮೇಣ ಇಡೀ ಪ್ರದೇಶದ ಸುತ್ತಮುತ್ತ ವಾಣಿಜ್ಯವಹಿವಾಟು ನಡೆಯುವ ಪ್ರಮುಖ ಕೇಂದ್ರವಾಗಲಿದೆ. ಇದರಿಂದ ಸಹಜವಾಗಿಯೇ ಜೀವಜಂತುಗಳು ಅಳಿಯುತ್ತವೆ. ವನ್ಯಜೀವಿಗಳು ಜನವಸತಿ ಪ್ರದೇಶಗಳತ್ತ ನುಗ್ಗುತ್ತವೆ.ಇನ್ನು ಯೋಜನೆ ಜಾರಿಗೆ ಬಂದರೆ ಮರಗಳ ಹನನವೂ ಆಗುತ್ತದೆ. ಇದು ಪರಿಸರದ ಮೇಲೆ ನೇರವಾದ ಪ್ರಭಾವ ಬೀರಲಿದೆ.ಸುರಕ್ಷತೆಯೇ ಅನುಮಾನ:ಕೇಬಲ್ ಕಾರ್ ಮಾಡಬೇಕೆಂದು ಹೊರಟಿರುವ ಪ್ರದೇಶ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುತ್ತದೆ. ಇಲ್ಲಿ ಗುಡ್ಡಕುಸಿತ ಸೇರಿದಂತೆ ಪ್ರಾಕೃತಿಕ ವಿಕೋಪಗಳು ಆಗ್ಗಿಂದ್ದಾಗ್ಗೆ ಸಂಭವಿಸುತ್ತಲೇ ಇರುತ್ತದೆ. ಭೂಕುಸಿತದಂತಹ ಘಟನೆಗಳು ಸಂಭವಿಸಿದರೆ ಅಪಾರವಾದ ಜೀವಹಾನಿ ಉಂಟಾಗುವ ಸಾಧ್ಯತೆಗಳಿವೆ ಎಂದು ಪರಿಸರ ತಜ್ಞರು ಎಚ್ಚರಿಸುತ್ತಾರೆ. ಮುಂಗಾರಿನ ವೇಳೆ ಬುಸುಗುಡುವ ಗಾಳಿ, ಮುಂಗಾರು ಪೂರ್ವದಲ್ಲಿ ಅಪ್ಪಳಿಸುವ ಸಿಡಿಲುಗಳು, ಧೋ ಎಂದು ವಾರಗಟ್ಟಲೆ ಸುರಿಯುವ ಬಿರುಮಳೆ ಇವೆಲ್ಲವೂ ಕೇಬಲ್ ಕಾರ್ಗಳ ಸುರಕ್ಷತೆಗೆ ಸವಾಲುಗಳನ್ನು ಒಡ್ಡಿವೆ. ಮಕ್ಕಳ ರೈಲಿಗಿಲ್ಲ ಮನ್ನಣೆ, ಸಿರಿವಂತರ ಕಾರಿಗೆ ಮಣೆ!ರೈಲು ಸಂಪರ್ಕವನ್ನೇ ಕಾಣದ ಕೊಡಗು ಜಿಲ್ಲೆಯಲ್ಲಿರುವ ಮಕ್ಕಳು ರೈಲನ್ನು ನೋಡುವ ಮತ್ತು ರೈಲನ್ನು ಸ್ಪರ್ಶಿಸುವ ಹಾಗೂ ರೈಲಿನೊಳಗೆ ಪ್ರಯಾಣ ಮಾಡುವ ವಿಶಿಷ್ಟ ಅನುಭವ ಕೊಡುವಂತಹ ರಾಜಾಸೀಟ್ ಉದ್ಯಾನದ ಮಕ್ಕಳ ರೈಲನ್ನು ಸರ್ಕಾರ ಮರೆತೆ ಬಿಟ್ಟಿದೆ. ಅದರ ಟ್ರಾಕ್ಗಳು, ಬೋಗಿಗಳು ಪಳೆಯುಳಿಕೆಗಳಂತೆ ಇವೆ. ಆದರೆ, ಮತ್ತೊಂದು ದಿಕ್ಕಿನಲ್ಲಿ ಸರ್ಕಾರ ಕೇಬಲ್ ಕಾರ್ಗಾಗಿ ಪ್ರಯತ್ನ ಮಾಡುತ್ತಿದೆ. ಇದು ಸಹ ಸಾಮಾನ್ಯ ಜನರ ಅತೃಪ್ತಿಗೆ ಕಾರಣವಾಗಿದೆ.ಕೇರಳದಲ್ಲಿ ಭೂಕುಸಿತವಾದರೂ, ಜಿಲ್ಲೆಯಲ್ಲಿ ಕೇಬಲ್ ಕಾರ್ಹಳೆಯದ್ದು ಬೇಡ, ಈಗಷ್ಟೇ ಕೇರಳದಲ್ಲಿ ಭೂಕುಸಿತ ಸಂಭವಿಸಿತು. ಅದರ ವಿಡಿಯೊ ದೃಶ್ಯಗಳು ಮೈ ಜುಮ್ಮೆನಿಸುವಂತಿವೆ. ಇದರ ಬೆನ್ನಲ್ಲೇ ಈ ಕೇಬಲ್ ಕಾರ್ ಅನ್ನು ಕೊಡಗಿನಲ್ಲಿ ತರುತ್ತಿರುವುದು ಸರ್ವಥಾ ಸರಿಯಲ್ಲ ಎಂಬ ಆಕ್ಷೇಪವೂ ಸಾರ್ವಜನಿಕರಿಂದ ವ್ಯಕ್ತವಾಗಿದೆ.‘ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ನಡುವೆ ಸಮತೋಲನ ಅಗತ್ಯ’ಮಲ್ಲಳ್ಳಿ ಜಲಪಾತದಲ್ಲಿ ರೋಪ್ವೇ ನಿರ್ಮಿಸುವುದಾದರೆ ಪರಿಸರ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಪರಿಸರ ಪರಿಣಾಮ ಮೌಲ್ಯಮಾಪನ (ಇಐಎ) ನಡೆಸಿ, ಅರಣ್ಯಕ್ಕೆ ಕನಿಷ್ಠ ಹಾನಿಯಾಗುವಂತೆ ಯೋಜನೆಯನ್ನು ರೂಪಿಸಬೇಕು. ಪ್ರವಾಸೋದ್ಯಮದ ಅಭಿವೃದ್ಧಿಯ ಜೊತೆಗೆ ಪ್ರಕೃತಿ, ಜೀವವೈವಿಧ್ಯ ಮತ್ತು ಸ್ಥಳೀಯರ ಹಿತಾಸಕ್ತಿಯನ್ನು ಕಾಪಾಡುವುದು ಅತ್ಯಂತ ಮುಖ್ಯ. ಆದ್ದರಿಂದ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಎರಡರ ನಡುವೆ ಸಮತೋಲನ ಸಾಧಿಸಿದರೆ ಮಾತ್ರ ರೋಪ್ವೇ ಯೋಜನೆಯನ್ನು ಜಾರಿಗೊಳಿಸಬೇಕು.– ಸಂಗಮೇಶ ದಿನೇಶ ನಾಯಕ್, ವಿಜಯಪುರ.‘ಪ್ರವಾಸೋದ್ಯಮದ ಬೆಳವಣಿಗೆಗೆ ಸಹಕಾರಿ’ಕೊಡಗಿನ ಕುಶಾಲನಗರ ಮತ್ತು ಮಡಿಕೇರಿ ಭಾಗಗಳು ಪ್ರವಾಸೋದ್ಯಮದಲ್ಲಿ ವೇಗವಾಗಿ ಮುನ್ನಡೆಯುತ್ತಿದ್ದರೆ, ಸೋಮವಾರಪೇಟೆ ತಾಲೂಕು ಮಾತ್ರ ಇಂದಿಗೂ ಸೂಕ್ತ ರಸ್ತೆ ಸಂಪರ್ಕ ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ಹಿಂದುಳಿದಿದೆ. ಈ ಭಾಗದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಮಲ್ಲಳ್ಳಿ ರೋಪ್ವೇ ಯೋಜನೆ ಅತ್ಯಂತ ಸಹಕಾರಿಯಾಗಬಲ್ಲದು.ಈ ಯೋಜನೆಯಿಂದಾಗಿ ಸ್ಥಳೀಯ ಜನರಿಗೆ ವ್ಯಾಪಾರ-ವಹಿವಾಟು, ಹೋಟೆಲ್ ಉದ್ಯಮ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿ. ಆದರೆ, ಯೋಜನೆ ಜಾರಿಯಾಗುವಾಗ ಈ ಭಾಗದ ಸೂಕ್ಷ್ಮ ಪರಿಸರ ಮತ್ತು ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ಯಾವುದೇ ಅಡ್ಡಿಯಾಗಬಾರದು. ಪ್ರಕೃತಿಯ ಸಹಜ ಸೌಂದರ್ಯಕ್ಕೆ ಧಕ್ಕೆ ಬಾರದಂತೆ, ಪರಿಸರ ಸ್ನೇಹಿ ತಂತ್ರಜ್ಞಾನ ಬಳಸಿ ರೋಪ್ವೇ ನಿರ್ಮಿಸುವುದು ಇಂದಿನ ಅಗತ್ಯವಾಗಿದೆ. ಆ ಮೂಲಕ ಸೋಮವಾರಪೇಟೆ ಭಾಗಕ್ಕೂ ಆರ್ಥಿಕ ಚೇತರಿಕೆ ಸಿಗುವಂತಾಗಲಿ.– ಜಿ.ಕೆ.ಅವಿಲಾಶ್, ಕಾಜೂರು‘ಪ್ರಸ್ತಾವ ಸಲ್ಲಿಸಲಾಗಿದೆ’ಕೇಬಲ್ ಕಾರ್ ಪ್ರಸ್ತಾವವನ್ನು ತಯಾರಿಸಲಾಗಿದೆ. ಒಟ್ಟು ₹ 550 ಕೋಟಿ ಮೊತ್ತದ ಯೋಜನೆ ಇದ್ದಾಗದ್ದು, ಎಲ್ಲ ಪೂರ್ವಸಿದ್ಧತೆಗಳ ಮುಗಿದಿದ್ದು, ಅರಣ್ಯ ಇಲಾಖೆ ಅನುಮತಿ ನೀಡಿದ ಬಳಿಕ ಆರಂಭವಾಗಲಿದೆ.– ಶಶಿಧರ್, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ.