Sandalwood: ಕೃಷ್ಣನ ರೋಲ್ಡ್ಗೋಲ್ಡ್ ಸ್ಟೋರಿ!
‘ಯುದ್ಧಕಾಂಡ: ಚಾಪ್ಟರ್ 2’ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ‘ಸಾಲ’ದಿಂದ ಸುದ್ದಿಯಾಗಿದ್ದ ಕೃಷ್ಣ ಅಜೇಯ್ ರಾವ್ ಇದೀಗ ಅರಿಯದೆ ‘ರೋಲ್ಡ್ಗೋಲ್ಡ್’ ಧರಿಸಿದ ಕಥೆಯನ್ನು ಹೇಳಿದ್ದಾರೆ. ಇಲ್ಲಿ ‘ರೋಲ್ಡ್ಗೋಲ್ಡ್’ ಎಂದರೆ ಸತ್ವ, ಗುಣಮಟ್ಟವಿಲ್ಲದ ಸಿನಿಮಾ. ಸೋಮವಾರ(ಜುಲೈ 27) ನಡೆದ ‘ಪಾರ್ಟ್ನರ್’ ಸಿನಿಮಾದ ‘ಅಮೋರ’ ಹಾಡು ಬಿಡುಗಡೆ ಸಮಾರಂಭವು ಅಜೇಯ್ ರಾವ್ ಅವರ ಈ ‘ರ

‘ಯುದ್ಧಕಾಂಡ: ಚಾಪ್ಟರ್ 2’ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ‘ಸಾಲ’ದಿಂದ ಸುದ್ದಿಯಾಗಿದ್ದ ಕೃಷ್ಣ ಅಜೇಯ್ ರಾವ್ ಇದೀಗ ಅರಿಯದೆ ‘ರೋಲ್ಡ್ಗೋಲ್ಡ್’ ಧರಿಸಿದ ಕಥೆಯನ್ನು ಹೇಳಿದ್ದಾರೆ. ಇಲ್ಲಿ ‘ರೋಲ್ಡ್ಗೋಲ್ಡ್’ ಎಂದರೆ ಸತ್ವ, ಗುಣಮಟ್ಟವಿಲ್ಲದ ಸಿನಿಮಾ. ಸೋಮವಾರ(ಜುಲೈ 27) ನಡೆದ ‘ಪಾರ್ಟ್ನರ್’ ಸಿನಿಮಾದ ‘ಅಮೋರ’ ಹಾಡು ಬಿಡುಗಡೆ ಸಮಾರಂಭವು ಅಜೇಯ್ ರಾವ್ ಅವರ ಈ ‘ರೋಲ್ಡ್ಗೋಲ್ಡ್’ ಕಥೆಗೆ ವೇದಿಕೆಯಾಯಿತು.‘ಕೆಲವು ಸಿನಿಮಾಗಳು ಹೃದಯಕ್ಕೆ ಹತ್ತಿರವಾಗುತ್ತವೆ. ಇಂತಹ ಸಿನಿಮಾ ‘ಪಾರ್ಟ್ನರ್’. ಸಿನಿಮಾದ ಶೀರ್ಷಿಕೆಯಲ್ಲೇ ನನ್ನ ಹೃದಯದ ಸಣ್ಣ ಭಾಗವಿದೆ. ಪ್ರೀತಿಯಲ್ಲಿ ಇಲ್ಲದ ಮೇಲೆ ನಾನು ಏಕೆ ಹೃದಯವನ್ನು ನೀಡಲಿ. ಇನ್ನು ಮುಂದೆ ಯಾವ ಸಿನಿಮಾ ಪ್ರಚಾರಕ್ಕೆ ಬರಬೇಕು ಎನ್ನುವುದನ್ನು ಆಯ್ಕೆ ಮಾಡಲಿದ್ದೇನೆ. ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದೇನೆ ಎಂದರೆ ನಾನೊಬ್ಬ ಸೇಲ್ಸ್ಮೆನ್. ನನಗೇ ಆ ಸಿನಿಮಾದ ಗುಣಮಟ್ಟ ಇಷ್ಟವಾಗಿಲ್ಲ ಎಂದ ಮೇಲೆ ನಾನು ಹೇಗೆ ಅದನ್ನು ಪ್ರಚಾರ ಮಾಡಲಿ’ ಎಂದು ಪ್ರಶ್ನಿಸಿದ್ದಾರೆ.‘ಉತ್ಪಾದಕರು ಮೊದಲು ಇದನ್ನು ಚಿನ್ನ ಎಂದು ಕೊಡುತ್ತಾರೆ. ಅದನ್ನು ನಾನು ಹಾಕಿಕೊಂಡು ನೋಡಿದ ಬಳಿಕ ರೋಲ್ಡ್ಗೋಲ್ಡ್ ಎಂದು ತಿಳಿಯುತ್ತದೆ. ಹೀಗಾದಾಗ ನಾನು ಹೇಗೆ ಅದನ್ನು ಪ್ರಚಾರ ಮಾಡಲಿ. ಈತ ಉತ್ತಮ ಸೇಲ್ಸ್ಮೆನ್. ಈ ಚಿನ್ನ ಈತ ಹಾಕೊಂಡರೆ ಚೆನ್ನಾಗಿ ಮಾರಾಟವಾಗುತ್ತದೆ ಎಂದು ಅವರಿಗೆ ತಿಳಿದಿರುತ್ತದೆ. ಬೇರೆ ಬೇರೆ ಆಭರಣಗಳನ್ನು ಧರಿಸಲು ಬೇರೆ ಬೇರೆ ನಾಯಕರಿದ್ದಾರೆ. ಅವರು ಅದರ ಉತ್ತಮ ಸೇಲ್ಸ್ಮೆನ್. ‘ಪ್ರೀತಿ’ ಎನ್ನುವ ಆಭರಣ ಬಂದಾಗ ನಾನು ಬೆಸ್ಟ್ ಸೇಲ್ಸ್ಮೆನ್. ಇದನ್ನು ಮಾರಾಟ ಮಾಡುವ ಮುನ್ನ ನಾನೇ ಧರಿಸಿ ನೋಡುತ್ತೇನೆ. ದಿನಗಳು ಉರುಳಿದಂತೆ ರೋಲ್ಡ್ಗೋಲ್ಡ್ ಎಂದು ನಿಧಾನಕ್ಕೆ ಗೊತ್ತಾಗುತ್ತದೆ. ಇನ್ನು ಮುಂದೆ ವೇದಿಕೆ ಏರಿ ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದೇನೆ ಎಂದರೆ ನನಗೆ ಆ ಸಿನಿಮಾ ಇಷ್ಟವಾಗಿದೆ, ಸಮಾಧಾನ ಕೊಟ್ಟಿದೆ ಎಂದರ್ಥ’ ಎಂದರು.‘ಎಕ್ಸ್ಕ್ಯೂಸ್ ಮಿ’ ಸಂದರ್ಭದಲ್ಲಿ ಸಿನಿಮಾದ 365ನೇ ದಿನ ಆನಂದ್ರಾವ್ ವೃತ್ತದಿಂದ ಹಿಡಿದು ತ್ರಿವೇಣಿ ಚಿತ್ರಮಂದಿರದವರೆಗೂ ಜನದಟ್ಟಣೆ ಇತ್ತು. ಈಗ ಈ ರೀತಿಯ ಕ್ರೇಜ್ ಇಲ್ಲ. ‘ಯುದ್ಧಕಾಂಡ’ ಸಿನಿಮಾದ ಸ್ಯಾಟಲೈಟ್ ಮಾರಾಟ ಯಾಕಾಗಿಲ್ಲ ಎನ್ನುವುದಕ್ಕೆ ದೊಡ್ಡ ಕಥೆ ಇದೆ. ಸಿನಿಮಾ ‘ಅಮೆಜಾನ್’ ಒಟಿಟಿಗೆ ಬಂದ ಬಳಿಕ ನಾನು 3 ತಿಂಗಳಲ್ಲಿ ₹2 ಕೋಟಿ ಗಳಿಸಿದ್ದೇನೆ. ‘ಪೆಹಲ್ಗಾಮ್’ ದಾಳಿ ಕಾರಣದಿಂದ ಮೊದಲ ವಾರದಲ್ಲಿ ಗಳಿಕೆ ಕಡಿಮೆ ಇತ್ತು. ಸಿನಿಮಾ ನೋಡಿದವರು ಮೆಚ್ಚಿದರು. ಸಿನಿಮಾ ಕರ್ತೃವಿನ ಕನಸಿಗೆ ಯಾವ ಗ್ಯಾರಂಟಿಯೂ ಇರುವುದಿಲ್ಲ’ ಎಂದರು.ಸಿನಿಮಾದಲ್ಲಿ ಸತ್ವ ಇದ್ದರೆ ಗೆಲ್ಲುತ್ತದೆ‘ಕೆಲವೊಮ್ಮೆ ನಂಬಿಕೆಯಿಂದ ಸಿನಿಮಾ ಒಪ್ಪಿಕೊಳ್ಳುತ್ತೇವೆ. ಇಲ್ಲೇ ಬಂದು ಮೋಸ ಹೋಗುತ್ತೇವೆ ಎಂದು ಗೊತ್ತಾಗುವುದಿಲ್ಲ. ಕೆಲವೊಮ್ಮೆ ಚಿತ್ರಕಥೆಯು ಪ್ರೇಕ್ಷಕರಿಗೆ ಕನೆಕ್ಟ್ ಆಗುವುದಿಲ್ಲ ಎಂದು ತಿಳಿಯುತ್ತದೆ. ಹೀಗಿರುವಾಗ ಗುಣಮಟ್ಟ ಇಳಿಯುತ್ತದೆ. ಇದನ್ನು ಪ್ರಚಾರ ಮಾಡಲು ಧೈರ್ಯ ಬರುವುದೇ ಇಲ್ಲ. ಯಾರೋ ಮಾಡಿದ ತಪ್ಪಿಗೆ ನಾನು ಮಾರುಕಟ್ಟೆಯನ್ನು ಎದುರಿಸಬೇಕಾಗುತ್ತದೆ. ನಾನು ಪ್ರಚಾರಕ್ಕೆ ಹೋದರೂ ಹೋಗದೇ ಇದ್ದರೂ ಆ ಸಿನಿಮಾದ ಫಲಿತಾಂಶ ಅದೇ ಆಗಿರುತ್ತದೆ. ನಾನು ಮಾತನಾಡಿದೆ ಎಂದು ಸಿನಿಮಾ ಗೆಲ್ಲುವುದಿಲ್ಲ. ಸಿನಿಮಾದಲ್ಲಿ ಸತ್ವ ಇದ್ದರೆ ಗೆಲ್ಲುತ್ತದೆ. ನೂರು ಕೋಟಿ ಸಿನಿಮಾದ ಭಾವನೆಗೂ ಒಂದೂ ಕೋಟಿ ಸಿನಿಮಾದ ಭಾವನೆಗೂ ವ್ಯತ್ಯಾಸವಿಲ್ಲ. ಈ ಭಾವನೆಗಳು ಪ್ರೇಕ್ಷಕರಿಗೆ ತಲುಪಿದೆಯೇ ಎನ್ನುವುದು ಮುಖ್ಯ. ಚಿತ್ರತಂಡದೊಳಗೆ ಚರ್ಚೆ ಆಗಬೇಕು. ನಾಯಕ ಮತ್ತು ನಾಯಕಿ ಕಥೆಯೊಳಗೆ ಒಳಗೊಳ್ಳಲು ಸಿದ್ಧವಾಗಿದ್ದಾರೆ ಎಂದರೆ ಅವರಿಗೆ ಆ ಸಿನಿಮಾ ಇಷ್ಟವಾಗಿದೆ ಎಂದರ್ಥ. ಚಿತ್ರೀಕರಣದ ಸಂದರ್ಭದಲ್ಲಿ ಕಲಾವಿದರಿಗೆ ಅಚ್ಚರಿ ಇರಬಾರದು’ ಎನ್ನುತ್ತಾರೆ ಅಜೇಯ್.‘ಇಲ್ಲಿಯವರೆಗೆ ಎಷ್ಟು ‘ರೋಲ್ಡ್ಗೋಲ್ಡ್’ ಧರಿಸಿದ್ದೀರಿ?’ ಎನ್ನುವ ಪ್ರಶ್ನೆಗೆ ಉತ್ತರಿಸಿ, ‘ಎಕ್ಸ್ಕ್ಯೂಸ್ ಮಿ’ಯಿಂದ ಇಲ್ಲಿಯವರೆಗೆ ಗೋಲ್ಡ್ ಹಾಕಿರುವುದು ಕಡಿಮೆ’ ಎನ್ನುತ್ತಾ ಅವರು ಮಾತಿಗೆ ವಿರಾಮವಿತ್ತರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260729-51-1288374537