World Stroke Day: ವಯಸ್ಕರಿಗೆ ಮಾತ್ರವಲ್ಲ, ಮಕ್ಕಳಿಗೂ ಬರಬಹುದು ಪಾರ್ಶ್ವವಾಯು
ವಯಸ್ಕರಲ್ಲಿ ಅನಾರೋಗ್ಯಕರ ಜೀವನಶೈಲಿಯಿಂದ ಪಾರ್ಶ್ವವಾಯು ಬಂದರೆ, ಮಕ್ಕಳಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಕೆಲವು ಆಂತರಿಕ ಸಮಸ್ಯೆಗಳಿಂದ ಇದು ಕಾಣಿಸಿಕೊಳ್ಳಬಹುದು. ಇದರ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸುವುದು ಹೇಗೆ? ಇಲ್ಲಿದೆ ಮಾಹಿತಿ.'ಪಾರ್ಶ್ವವಾಯು' ಅಥವಾ 'ಸ್ಟ್ರೋಕ್' ಎಂದಾಕ್ಷಣ ನಮ್ಮ ಕಣ್ಣಮುಂದೆ ಬರುವುದು ವಯಸ್ಸಾದ ಅಥವಾ ಮಧ್ಯವಯಸ್ಕ ವ್ಯಕ್ತಿಗಳ ಚಿತ್ರಣ. ಹಠ

ವಯಸ್ಕರಲ್ಲಿ ಅನಾರೋಗ್ಯಕರ ಜೀವನಶೈಲಿಯಿಂದ ಪಾರ್ಶ್ವವಾಯು ಬಂದರೆ, ಮಕ್ಕಳಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಕೆಲವು ಆಂತರಿಕ ಸಮಸ್ಯೆಗಳಿಂದ ಇದು ಕಾಣಿಸಿಕೊಳ್ಳಬಹುದು. ಇದರ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸುವುದು ಹೇಗೆ? ಇಲ್ಲಿದೆ ಮಾಹಿತಿ.'ಪಾರ್ಶ್ವವಾಯು' ಅಥವಾ 'ಸ್ಟ್ರೋಕ್' ಎಂದಾಕ್ಷಣ ನಮ್ಮ ಕಣ್ಣಮುಂದೆ ಬರುವುದು ವಯಸ್ಸಾದ ಅಥವಾ ಮಧ್ಯವಯಸ್ಕ ವ್ಯಕ್ತಿಗಳ ಚಿತ್ರಣ. ಹಠಾತ್ತನೆ ಮುಖ ಒಂದು ಕಡೆ ವಾಲುವುದು, ಮಾತು ತೊದಲುವುದು ಅಥವಾ ದೇಹದ ಒಂದು ಭಾಗ ಸ್ವಾಧೀನ ಕಳೆದುಕೊಳ್ಳುವುದು ನಮಗೆ ನೆನಪಾಗುತ್ತದೆ. ಬೆಂಗಳೂರಿನಂತಹ ವೇಗದ ಹಾಗೂ ಒತ್ತಡದ ಮಹಾನಗರಗಳಲ್ಲಿ ವಯಸ್ಕರಿಗೆ ಪಾರ್ಶ್ವವಾಯು ಬರಲು ಅವರ ಜೀವನಶೈಲಿಯೇ ಕಾರಣ ಎಂದು ನಾವು ನಂಬಿದ್ದೇವೆ. ಗಂಟೆಗಟ್ಟಲೆ ಒಂದೇ ಕಡೆ ಕುಳಿತು ಕೆಲಸ ಮಾಡುವುದು, ವಿಪರೀತ ಒತ್ತಡ, ನಿದ್ರಾಹೀನತೆ, ಜಂಕ್ ಫುಡ್ ಸೇವನೆ, ವ್ಯಾಯಾಮದ ಕೊರತೆ, ಧೂಮಪಾನ, ಅಧಿಕ ರಕ್ತದೊತ್ತಡ ಹಾಗೂ ಚಿಕ್ಕ ವಯಸ್ಸಿನಲ್ಲೇ ಬರುವ ಮಧುಮೇಹ ಇವೆಲ್ಲವನ್ನೂ ನಾವು ದೂರುತ್ತೇವೆ. ಹೌದು, ಈ ಮೇಲಿನ ಕಾರಣಗಳು ಪಾರ್ಶ್ವವಾಯುವಿಗೆ ತಕ್ಷಣದ ಪ್ರಚೋದನೆ ನೀಡುತ್ತವೆ ನಿಜ. ಆದರೆ, ವಯಸ್ಕರಲ್ಲಿ ಪಾರ್ಶ್ವವಾಯು ಬರಲು ಅಸಲಿ ಕಾರಣವೇ ಬೇರೆ. ರಕ್ತನಾಳಗಳ ವಯಸ್ಸಾಗುವಿಕೆ, ದೀರ್ಘಕಾಲದ ಉರಿಯೂತ ಮತ್ತು ದಶಕಗಳಿಂದ ದೇಹದಲ್ಲಿ ಶೇಖರಣೆಯಾಗುವ ಚಯಾಪಚಯ ದೋಷಗಳು ಒಳಗೊಳಗೇ ಈ ಸಮಸ್ಯೆಯನ್ನು ಹುಟ್ಟುಹಾಕುತ್ತವೆ.ಆದರೆ, ಇಂದಿನ ದಿನಗಳಲ್ಲಿ ಸಾರ್ವಜನಿಕರಲ್ಲಿರುವ ಅತ್ಯಂತ ಅಪಾಯಕಾರಿ ತಪ್ಪು ಕಲ್ಪನೆಯೆಂದರೆ, ʼಪಾರ್ಶ್ವವಾಯು ಕೇವಲ ವಯಸ್ಕರಿಗೆ ಮಾತ್ರ ಬರುತ್ತದೆʼ ಎಂಬುದು. ಕಟುಸತ್ಯವೇನೆಂದರೆ, ಚಿಕ್ಕ ಮಕ್ಕಳು, ಅಂಬೆಗಾಲಿಡುವ ಶಿಶುಗಳು ಮತ್ತು ನವಜಾತ ಶಿಶುಗಳಿಗೂ ಪಾರ್ಶ್ವವಾಯು ಬರಬಹುದು.ಮಕ್ಕಳಲ್ಲಿ ಪಾರ್ಶ್ವವಾಯು ಬರಲು ಕೆಟ್ಟ ಜೀವನಶೈಲಿ ಅಥವಾ ಕೊಲೆಸ್ಟ್ರಾಲ್ ಕಾರಣವಲ್ಲ. ಬದಲಾಗಿ, ಕೆಲವು ಸಂಕೀರ್ಣವಾದ ಆಂತರಿಕ ಸಮಸ್ಯೆಗಳು ಕಾರಣವಾಗುತ್ತವೆ. ಉದಾಹರಣೆಗೆ, ರಕ್ತನಾಳಗಳ ರಚನೆಯಲ್ಲಿನ ದೋಷ (ಮೊಯಾಮೊಯಾ ಕಾಯಿಲೆಯಂತಹವು), ಸಿಕಲ್ ಸೆಲ್ ಅನೀಮಿಯಾದಂತಹ ರಕ್ತದ ಕಾಯಿಲೆಗಳು, ಹುಟ್ಟಿನಿಂದಲೇ ಇರುವ ಹೃದಯದ ದೋಷಗಳು, ಆಡುವಾಗ ತಲೆ ಅಥವಾ ಕುತ್ತಿಗೆಗೆ ಬೀಳುವ ಬಲವಾದ ಪೆಟ್ಟು, ಅಥವಾ ಚಿಕನ್ಪಾಕ್ಸ್ನಂತಹ ಸಾಮಾನ್ಯ ಕಾಯಿಲೆಗಳ ನಂತರ ರಕ್ತನಾಳಗಳಲ್ಲಿ ಉಂಟಾಗುವ ತೀವ್ರ ಉರಿಯೂತ (ವ್ಯಾಸ್ಕುಲೈಟಿಸ್) ಮಕ್ಕಳಿಗೆ ಪಾರ್ಶ್ವವಾಯು ಬರುವಂತೆ ಮಾಡಬಹುದು.ಆಟವಾಡಿಕೊಂಡು ಚುರುಕಾಗಿರುವ ಮಗುವಿಗೂ ಪಾರ್ಶ್ವವಾಯು ಬರಬಹುದು ಎಂದು ಪೋಷಕರು, ಶಿಕ್ಷಕರು, ಕುಟುಂಬದ ವೈದ್ಯರು ಕೂಡ ಸಾಮಾನ್ಯವಾಗಿ ಊಹಿಸಿರುವುದಿಲ್ಲ. ಬೆಂಗಳೂರಿನಂತಹ ನಗರದ ಬಿಡುವಿಲ್ಲದ ದಿನಚರಿಯಲ್ಲಿ, ಮಕ್ಕಳಲ್ಲಿ ಕಾಣುವ ಎಚ್ಚರಿಕೆಯ ಲಕ್ಷಣಗಳನ್ನು ನಾವು ನಿರ್ಲಕ್ಷಿಸುತ್ತೇವೆ. ತೀವ್ರ ಮೈಗ್ರೇನ್, ಡಿಹೈಡ್ರೇಶನ್, ವೈರಲ್ ಜ್ವರದ ಸುಸ್ತು ಅಥವಾ ಮಗುವಿನ ಹಠಮಾರಿತನ ಎಂದು ತಪ್ಪಾಗಿ ಭಾವಿಸಿಬಿಡುತ್ತೇವೆ. ಇದು ಅತ್ಯಂತ ಅಪಾಯಕಾರಿ.ಹಾಗಾಗಿಯೇ, ಪ್ರತಿಯೊಬ್ಬ ಪೋಷಕರೂ ʼBE FASTʼ ಎಂಬ ತುರ್ತು ಸೂತ್ರವನ್ನು ನೆನಪಿಟ್ಟುಕೊಳ್ಳುವುದು ಅತ್ಯಗತ್ಯ. ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ತಕ್ಷಣ ಎಚ್ಚೆತ್ತುಕೊಳ್ಳಬೇಕು:* B – Balance (ಸಮತೋಲನ): ಮಗು ಹಠಾತ್ತನೆ ಸಮತೋಲನ ಕಳೆದುಕೊಂಡು ಬೀಳುವುದು ಅಥವಾ ನಡೆಯಲು ಕಷ್ಟಪಡುವುದು.* E – Eyes (ಕಣ್ಣುಗಳು): ದೃಷ್ಟಿ ದಿಢೀರ್ ಮಂದವಾಗುವುದು ಅಥವಾ ನೋಡಲು ತೊಂದರೆಯಾಗುವುದು.* F – Face (ಮುಖ): ಮುಖ ಒಂದು ಕಡೆ ವಾಲಿದಂತಾಗುವುದು ಅಥವಾ ನಗುವಾಗ ಮುಖ ಸೊಟ್ಟಗಾಗುವುದು.* A – Arms (ಕೈ-ಕಾಲುಗಳು): ದೇಹದ ಒಂದು ಬದಿಯ ಕೈ ಅಥವಾ ಕಾಲಿನಲ್ಲಿ ಇದ್ದಕ್ಕಿದ್ದಂತೆ ದೌರ್ಬಲ್ಯ (ವೀಕ್ನೆಸ್) ಕಾಣಿಸಿಕೊಳ್ಳುವುದು.* S – Speech (ಮಾತು): ಮಾತು ತೊದಲುವುದು ಅಥವಾ ನಾವು ಹೇಳುವ ಸಣ್ಣಪುಟ್ಟ ಮಾತುಗಳೂ ಮಗುವಿಗೆ ಅರ್ಥವಾಗದಿರುವುದು.* T – Time (ಸಮಯ): ಸಮಯ ಅತ್ಯಂತ ಅಮೂಲ್ಯ. ಇದು ತುರ್ತು ಪರಿಸ್ಥಿತಿಯಾಗಿರುವುದರಿಂದ ತಕ್ಷಣ ಆಸ್ಪತ್ರೆಗೆ ಧಾವಿಸಬೇಕು.ಪೋಷಕರೇ ಗಮನಿಸಿಹಸುಗೂಸುಗಳಲ್ಲಿ ದಿಢೀರನೆ ಸೆಳೆತ (ಫಿಟ್ಸ್) ಬರುವುದು, ವಿಪರೀತ ಸುಸ್ತು ಅಥವಾ ಮಗು ದೇಹದ ಒಂದು ಭಾಗವನ್ನು ಅಲುಗಾಡಿಸದೆ ಇರುವುದು ಕೂಡ ಪಾರ್ಶ್ವವಾಯುವಿನ ಲಕ್ಷಣವಾಗಿರಬಹುದು.ಇಂತಹ ಯಾವುದೇ ಲಕ್ಷಣಗಳು ಕಂಡುಬಂದಾಗ, ʼಸ್ವಲ್ಪ ಹೊತ್ತು ಕಾದು ನೋಡೋಣ, ಸರಿಯಾಗಬಹುದುʼ ಎಂಬ ನಿರ್ಲಕ್ಷ್ಯ ಖಂಡಿತಾ ಬೇಡ. ಯಾವುದೇ ವಿಳಂಬ ಮಾಡದೆ, 24/7 ಮಕ್ಕಳ ನರರೋಗ ತಜ್ಞರು ಮತ್ತು ಮೆದುಳಿನ ಸ್ಕ್ಯಾನಿಂಗ್ ಸೌಲಭ್ಯವಿರುವ ಸುಸಜ್ಜಿತ ಆಸ್ಪತ್ರೆಗೆ ಮಗುವನ್ನು ಕರೆದೊಯ್ಯಬೇಕು. ಸಕಾಲದಲ್ಲಿ ನೀಡುವ ಚಿಕಿತ್ಸೆಯು ಮಗುವಿನ ಜೀವವನ್ನು ಉಳಿಸುವುದಲ್ಲದೆ, ಅವರ ಭವಿಷ್ಯದ ಬೌದ್ಧಿಕ ಹಾಗೂ ದೈಹಿಕ ಬೆಳವಣಿಗೆಗೆ ತೊಂದರೆಯಾಗದಂತೆ ಕಾಪಾಡುತ್ತದೆ.ಲೇಖಕರು: ಡಾ. ಸಮೀತಾ ಮರ್ಸಿ ಪ್ರಭು, ಮಕ್ಕಳ ನರರೋಗ ತಜ್ಞರು, ಬರ್ತ್ರೈಟ್ ಬೈ ರೇನ್ಬೋ ಹಾಸ್ಪಿಟಲ್.