ಚಿಕ್ಕಮಗಳೂರು: ಜಿಲ್ಲೆಯಲ್ಲಿ ದೀಪಾವಳಿ ಬಗೆ ಬಗೆಯ ಆಚರಣೆ
ಚಿಕ್ಕಮಗಳೂರು: ಬೆಳಕಿನ ಹಬ್ಬ ದೀಪಾವಳಿ ಹಬ್ಬವು ಜಿಲ್ಲೆಯ ಹಲವೆಡೆ ವೈವಿಧ್ಯಮಯ ಆಚರಣೆಗಳಿವೆ. ಮಲೆನಾಡಿನಲ್ಲಿ ಅಂಟಿಕೆ–ಪಂಟಿಕೆ, ಕೋಲಾಟಗಳು ನಡೆದರೆ, ಬಯಲು ಸೀಮೆಯ ಲಂಬಾಣಿ ತಾಂಡ್ಯಗಳಲ್ಲಿ ಭೋಗ್ ಹಾಗೂ ಸೊಳೈ ಎಂಬ ಆಚರಣೆಗಳಿವೆ.ನರಕ ಚತುರ್ದಶಿಯ ದಿನ ಲಕ್ಷ್ಮಿಪೂಜೆ ವಿಭಿನ್ನವಾಗಿ ನಡೆಯುವುದು ಎಲ್ಲೆಡೆ ಸಾಮಾನ್ಯ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೆಲವು ದೇವಾಲಯಗಳಲ್ಲೂ ವಿಶ

ಚಿಕ್ಕಮಗಳೂರು: ಬೆಳಕಿನ ಹಬ್ಬ ದೀಪಾವಳಿ ಹಬ್ಬವು ಜಿಲ್ಲೆಯ ಹಲವೆಡೆ ವೈವಿಧ್ಯಮಯ ಆಚರಣೆಗಳಿವೆ. ಮಲೆನಾಡಿನಲ್ಲಿ ಅಂಟಿಕೆ–ಪಂಟಿಕೆ, ಕೋಲಾಟಗಳು ನಡೆದರೆ, ಬಯಲು ಸೀಮೆಯ ಲಂಬಾಣಿ ತಾಂಡ್ಯಗಳಲ್ಲಿ ಭೋಗ್ ಹಾಗೂ ಸೊಳೈ ಎಂಬ ಆಚರಣೆಗಳಿವೆ.ನರಕ ಚತುರ್ದಶಿಯ ದಿನ ಲಕ್ಷ್ಮಿಪೂಜೆ ವಿಭಿನ್ನವಾಗಿ ನಡೆಯುವುದು ಎಲ್ಲೆಡೆ ಸಾಮಾನ್ಯ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೆಲವು ದೇವಾಲಯಗಳಲ್ಲೂ ವಿಶೇಷ ಪೂಜೆಗಳು ನೆರವೇರುತ್ತವೆ. ಅದರಲ್ಲೂ ದೇವಿರಮ್ಮ ಉತ್ಸವ ಜಿಲ್ಲೆಯ ದೀಪಾವಳಿ ಹಬ್ಬದ ಕೇಂದ್ರ ಬಿಂದು.ಮೊದಲಿಗೆ ಗ್ರಾಮಸ್ಥರು, ಸುತ್ತಮುತ್ತಲ ಜನರು ಮಾತ್ರ ಬೆಟ್ಟ ಏರುತ್ತಿದ್ದರು. ಈಗ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಬರುವ ಭಕ್ತರು ಬೆಟ್ಟ ಏರಿ ದೇವಿಯ ದರ್ಶನ ಪಡೆಯುತ್ತಾರೆ. ಇನ್ನೂ ಮಂಗಳವಾರ ಸಂಜೆ ವೇಳೆಗೆ ಬೆಟ್ಟದ ತುದಿಯಲ್ಲಿ ದೀಪೋತ್ಸವ ನಡೆಯುತ್ತದೆ. ದೀಪವನ್ನು ಕಂಡು ದೂರದಿಂದಲೇ ಆರತಿ ಬೆಳಗುವ ಪದ್ಧತಿಯೂ ಇದೆ.ಗ್ರಾಮೀಣ ಪ್ರದೇಶ ಹಲವೆಡೆ ಗೋವುಗಳನ್ನು ಅಲಂಕರಿಸಿ ಅವುಗಳಿಗೆ ಪೂಜೆ ಮಾಡಲಾಗುತ್ತದೆ. ಕೃಷಿ ಪ್ರಧಾನವಾದ ಕುಟುಂಬಗಳಲ್ಲಿ ಈ ಪೂಜೆ ಚಾಲ್ತಿಯಲ್ಲಿದೆ. ಮನೆಯ ಮುಂದೆ ದೀಪ ಹಚ್ಚುವುದು, ಸಾಂಪ್ರದಾಯಿಕ ಗೂಡು ದೀಪಗಳನ್ನು ತಯಾರಿಸುವುದು ಸಾಮಾನ್ಯ. ದೇಗುಲಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.ಹುಲಿ ವೇಷ, ನಗಾರಿ ಸದ್ದುಕಳಸ: ಮಲೆನಾಡಿನಲ್ಲಿ ದೀಪಾವಳಿ ಸಡಗರಕ್ಕೆ ಹಲವು ಪ್ರಾಚೀನ ಸಂಪ್ರದಾಯಗಳು ಬೆಸೆದುಕೊಂಡಿವೆ. ದೀಪಾವಳಿಗೆ ಎರಡು ವಾರಗಳ ಮೊದಲೇ ಕರಾವಳಿಯಿಂದ ಹುಲಿ ವೇಷ, ರಾಮ–ಹನುಮ ವೇಷಧಾರಿಗಳು, ವಿವಿಧ ಹಾಸ್ಯಮಯ ವೇಷಗಾರರು ಮಲೆನಾಡಿಗೆ ಲಗ್ಗೆ ಇಡುತ್ತಾರೆ. ಮನೆಮನೆಗೆ ತೆರಳಿ ಕುಣಿತ ಪ್ರದರ್ಶಿಸುತ್ತಾರೆ.ಮಕ್ಕಳಿಗೆ ಹುಲಿ ವೇಷದ ನಗಾರಿ ಸದ್ದು ಕೇಳಿದೊಡನೆ ಪುಳಕ ಮತ್ತು ದೀಪಾವಳಿ ನೆನಪಾಗುತ್ತದೆ. ದೀಪಾವಳಿಯ ದಿನಗಳಲ್ಲಿ ರಾತ್ರಿ ವೇಳೆಗೆ ಕಾಡಿನಿಂದ ತಂದ ಧೂಪದ ಕಡ್ಡಿಗಳನ್ನು ಮನೆಗಳ ಮುಂದೆ ಮತ್ತು ಗದ್ದೆಗಳ ಬದುವಿನಲ್ಲಿ ಉರಿಸಲಾಗುತ್ತದೆ. ಇದಕ್ಕಾಗಿ ಹಲವು ದಿನಗಳ ಮೊದಲೇ ನಿಪುಣರು ಧೂಪದ ಮರಗಳನ್ನು ಗುರುತಿಸಿ ಅದರಲ್ಲಿ ಗಾಯ ಮಾಡಿ ಧೂಪ ಸಂಗ್ರಹಿಸಿರುತ್ತಾರೆ. ಕೆಲ ಆಯ್ದ ಮನೆಗಳ ಮುಂಬಾಗಿಲ ಮತ್ತು ಮುಂಬಾಗಿಲ ಎದುರು ಮುಂಡುಗ ಇರಿಸುವ ಆಚರಣೆ ಕೂಡ ಚಾಲ್ತಿಯಲ್ಲಿದೆ. ಮನೆಗಳ ಜೊತೆಗೆ ದನಗಳ ಕೊಟ್ಟಿಗೆ, ಗೋದಾಮುಗಳ ಬಾಗಿಲಿನ ಎರಡೂ ಬದಿ ಮುಂಡುಗದ ಸುಳಿ ಇರಿಸಲಾಗುತ್ತದೆ. ನಿಗದಿತ ಮನೆಗಳಲ್ಲಿ ನಿಗದಿತ ವ್ಯಕ್ತಿ ಮತ್ತು ಕುಟುಂಬಗಳೇ ಮುಂಡುಗ ಇರಿಸುವ ಸಂಪ್ರದಾಯ ಇದೆ. ಇದರ ಜೊತೆಗೆ ಮಲೆನಾಡಿನಲ್ಲಿ ಕರಿ-ಸಿರಿ ಎಂಬ ಆಚರಣೆ ಕೂಡ ಇದೆ. ಹೀಗೆ ದೀಪಾವಳಿಯ ಮೂರೂ ದಿನಗಳಂದು ಕಳಸ ತಾಲ್ಲೂಕಿನಲ್ಲಿ ವಿವಿಧ ಆಚರಣೆಗಳು ನಡೆಯುತ್ತವೆ. ಇವುಗಳನ್ನು ಜನ ತಪ್ಪದೆ ಆಚರಿಸುತ್ತಾರೆ ಮತ್ತು ಸಡಗರಪಡುತ್ತಾರೆ.ಅಂಟಿಕೆ– ಪಿಂಟಿಕೆ, ಕೋಲಾಟಕೊಪ್ಪ: ತಾಲ್ಲೂಕಿನಲ್ಲಿ ದೀಪಾವಳಿ ಸಂದರ್ಭದಲ್ಲಿ ಕೋಲಾಟ ಮತ್ತು ಅಂಟಿಕೆ ಪಿಂಟಿಕೆ ಎಂಬ ಎರಡು ಜನಪದ ಆಚರಣೆಗಳಿವೆ. ಈ ಎರಡು ಜನಪದ ಆಚರಣೆಗಳನ್ನು ಅಮಾವಾಸ್ಯೆಯಂದು ಆರಂಭಿಸಲಾಗುತ್ತದೆ. ಮೂರು ಅಥವಾ ಐದು ಹೀಗೆ ಬೆಸ ಸಂಖ್ಯೆಯ ದಿನಗಳಲ್ಲಿ ಮುಕ್ತಾಯಗೊಳಿಸುವುದು ವಾಡಿಕೆ.ಅಂಟಿಕೆ ಪಿಂಟಿಕೆ ಕಲಾವಿದರು ಹಣತೆಯಲ್ಲಿ ದೀಪ ಹಚ್ಚಿಕೊಂಡು ರಾತ್ರಿ ವೇಳೆ ಊರಿನ ಮನೆ–ಮನೆಗೆ ತೆರಳಿ ದೀಪದ ಬೆಳಕನ್ನು ವರ್ಗಾಯಿಸುತ್ತಾರೆ. ಇದಕ್ಕೆ ಅಂಟಿಗೆ–ಪಂಟಿಗೆ ಎಂದು ಕರೆಯಲಾಗುತ್ತದೆ. ಈ ವೇಳೆ ಬಾಗಿಲು ತೆಗೆಸುವ ಹಾಡು, ತುಳಸಿ ಹಾಡು, ಬಲೀಂದ್ರನ ಹಾಡುಗಳನ್ನು ಕಲಾವಿದರು ಹಾಡುತ್ತಾರೆ. ಕಲಾವಿದರು ಹಚ್ಚಿಕೊಂಡು ಹೋದ ದೀಪ ಆರದಂತೆ ಎಚ್ಚರ ವಹಿಸುವುದು ಅಗತ್ಯ. ಅದು ನಂದಿದರೆ ಕೇಡು ಎಂಬ ಭಾವನೆ ಇದೆ.ಕೋಲಾಟದ ಕಲಾವಿದರು ಬಲಿಂದ್ರನ ಆರಾಧನೆ ಮಾಡುತ್ತಾ ಅಮಾವಾಸ್ಯೆ ರಾತ್ರಿ ಪೂಜೆ ಮಾಡಿ ಕೋಲು ಕಡಿಯುತ್ತಾರೆ. ಹಗಲು ಹೊತ್ತಿನಲ್ಲಿ ಊರಿನ ಮನೆಗಳಿಗೆ ತೆರಳಿ ಕೋಲಾಟವಾಡುತ್ತಾರೆ. ಅವರು ಕೊಟ್ಟ ದವಸ ಧಾನ್ಯ ಸ್ವೀಕರಿಸುತ್ತಾರೆ. ಕೋಲಾಟ ಆಡಿಸುವ ಮನೆಗಳಿಗೆ ಬಲಿಂದ್ರ ಚಕ್ರವರ್ತಿ ಸುಖ ಸಂಪತ್ತು ದಯಪಾಲಿಸುತ್ತಾನೆ ಎಂಬ ನಂಬಿಕೆ ಇದೆ. ಆಟ ಆಡುವಾಗ ಕೋಲು ಕೆಳಗೆ ಬೀಳಿಸಿದರೆ ಅಶುಭ ಎಂದು ನಂಬಿಕೆಯೂ ಇದೆ.ಕೋಲಾಟ ಮತ್ತು ಅಂಟಿಕೆ ಪಿಂಟಿಕೆ ಕಲಾವಿದರು ಎದುರು–ಬದುರಾಗುವುದು ಕಡಿಮೆ. ಕೋಲಾಟದ ಕೋಲು ಹೊತ್ತವರು, ಅಂಟಿಗೆ ಪಂಟಿಗೆಯ ದೀಪ ಹಿಡಿದವರು ಯಾವುದೇ ಕಾರಣಕ್ಕೂ ಚಪ್ಪಲಿ ಧರಿಸುವಂತಿಲ್ಲ. ಎರಡೂ ಜಾನಪದ ಕಲಾವಿದರು ಆಚರಣೆ ಕೊನೆಗೊಳಿಸುವ ದಿನದಲ್ಲಿ ದೇವರ ಹೆಸರಿನಲ್ಲಿ ಎಡೆ ಇರಿಸಿ ಪ್ರಸಾದ ಸ್ವೀಕರಿಸುತ್ತಾರೆ. ಕೋಲಾಟ ಆಡಿದ ಕೋಲುಗಳನ್ನು ಪಲ್ಲಕ್ಕಿ ಮೇಲೆ ಇರಿಸಿ ಹಳ್ಳ ಅಥವಾ ನದಿಯಲ್ಲಿ ವಿಸರ್ಜನೆ ಮಾಡುವ ಪದ್ಧತಿ ಇದೆ.ಅಂಟಿಕೆ–ಪಿಂಟಿಕೆ ಉಳಿಸುವ ಕಾರ್ಯನರಸಿಂಹರಾಜಪುರ: ತಾಲ್ಲೂಕಿನ ಕಡಹಿನ ಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಕೊಪ್ಪ ಗ್ರಾಮದಲ್ಲಿ ದೀಪಾವಳಿ ಸಂದರ್ಭದ ಜಾನಪದ ಕಲೆ ಉಳಿಸಿ ಬೆಳೆಸುವ ಕಾರ್ಯವನ್ನು ಅಂಟಿಕೆ– ಪಿಂಟಿಕೆ ತಂಡ ಮಾಡುತ್ತಾ ಬಂದಿದೆ. ಶೆಟ್ಟಿಕೊಪ್ಪ ವ್ಯಾಪ್ತಿಯಲ್ಲಿ 1981ರಲ್ಲಿ ಸಾಲೂರು ರಾಮೇಗೌಡ, ಎಸ್.ಆರ್.ಶ್ರೀನಿವಾಸ್, ಮಂಜಪ್ಪಗೌಡ ಅವರು ಕಲಾ ತಂಡ ಸಂಘಟಿಸಿ ದೀಪಾವಳಿ ಸಂದರ್ಭದಲ್ಲಿ ಅಂಟಿಕೆ–ಪಿಂಟಿಕೆ ನಡೆಸಿಕೊಂಡು ಬರುತ್ತಿದೆ.ಅಂಟಿಕೆ, ಪಿಂಟಿಕೆ ಕಲಾ ತಂಡದ ಮುಮ್ಮೇಳ ಗಾಯಕರಾದ ಸಾಲೂರು ರಾಮೇಗೌಡರ ನಿಧನ ನಂತರ 10 ವರ್ಷಗಳು ಕಲಾ ತಂಡ ಸ್ತಬ್ಧವಾಗಿತ್ತು. ನಂತರ ಶೆಟ್ಟಿಕೊಪ್ಪ ಗ್ರಾಮ ಎಂ.ಮಹೇಶ್ ಅವರು ಜಾನಪದ ಕಲಾವಿದರು. ವಿಶೇಷವಾಗಿ ಭಜನಾ ಕಲಾವಿದರಾಗಿದ್ದ ತಮ್ಮ ತಂದೆ ಬಿ.ಕೆ.ಮರಳಪ್ಪ ಅವರಿಂದ ಬಳುವಳಿಯಾಗಿ ಬಂದಿರುವ ಈ ಕಲೆ ಉಳಿಸಲು ಕಲಾ ತಂಡ ಸಂಘಟಿಸಲು ಚಿಂತಿಸಿದರು.ಅಂಟಿಕೆ– ಪಿಂಟಿಕೆ ಕಲೆಯ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿದ್ದ ರತ್ನಮ್ಮ ಹಾಗೂ ದಾನಮ್ಮ ಅವರಿಂದ ಈ ಕಲೆಯ ಹಾಡುಗಳನ್ನು ಸಂಗ್ರಹಿಸಿದ್ದಾರೆ. ಅನೂಪ್ ಕುಮಾರ್ ಮತ್ತು ಎನ್.ಎಂ.ಕಾಂತರಾಜ್ ಉಸ್ತುವಾರಿಯಲ್ಲಿ ತಂಡ ರಚಿಸಿಕೊಂಡು ಸಾಂಪ್ರದಾಯಿಕ ಆಚರಣೆ ನಡೆಸಿಕೊಂಡು ಬಂದಿದ್ದಾರೆ.ಕೋವಿಡ್ ಸಂದರ್ಭದಲ್ಲಿ ಈ ಆಚರಣೆ ಸ್ಥಗಿತಗೊಂಡಿತ್ತು. ಪ್ರಸ್ತುತ ಎಂ.ಮಹೇಶ್ ಅವರ ನೇತೃತ್ವದಲ್ಲಿ ಡಿ.ಜಿ.ಸತೀಶ್, ಬಾಲರಾಜ್, ಹೂವಣ್ಣ, ವೆಂಕಟೇಶ್, ಎ.ಡಿ.ಉಮೇಶ್, ಧರಣೇಶ್ (ವಾಸು) ಅವರು ಕಲಾ ತಂಡ ರಚಿಸಿಕೊಂಡು ಅಂಟಿಕೆ ಪಿಂಟಿಕೆ ಸಾಂಪ್ರದಾಯಿಕ ಆಚರಣೆ ಅರಂಭಿಸಲು ನಿರ್ಧರಿಸಿದ್ದಾರೆ. ಇದೀಗ ದೀಪಾವಳಿ ಹಬ್ಬದ ದಿನವಾದ ಮಂಗಳವಾರ ರಾತ್ರಿಯಿಂದ ಬೆಳಗಿನ ಜಾವದ ತನಕ ಗ್ರಾಮದ ವ್ಯಾಪ್ತಿಯಲ್ಲಿ ಅಂಟಿಕೆ–ಪಿಂಟಿಕೆ ನಡೆಸಲು ಸಜ್ಜಾಗಿದ್ದಾರೆ. ಇದರಲ್ಲಿ ಸಂಗ್ರಹವಾಗುವ ಕಾಣಿಕೆ, ದವಸ ಧಾನ್ಯಗಳನ್ನು ಗ್ರಾಮದ ರೇವಣಸಿದ್ದೇಶ್ವರ ಸ್ವಾಮಿಯ ಜಾತ್ರೋತ್ಸವದ ಧಾರ್ಮಿಕ ಕಾರ್ಯಕ್ಕೆ ಬಳಸಲಾಗುತ್ತದೆ ಎಂದು ಜಾನಪದ ಕಲಾವಿದ ಎಂ.ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.ತಾಂಡಾಗಳಲ್ಲಿ ಭೋಗ್, ಸೊಳೈ ಆಚರಣೆಕಡೂರು: ತಾಲ್ಲೂಕಿನಲ್ಲಿ ಲಂಬಾಣಿ ಅಥವಾ ಬಂಜಾರ ತಾಂಡಗಳಲ್ಲಿ ದೀಪಾವಳಿ ಹಬ್ಬವನ್ನು ವಿಶೇಷವಾಗಿ ಆಚರಿಸುವ ಪದ್ಧತಿ ಜಾರಿಯಲ್ಲಿದೆ.ದೀಪಾವಳಿ ಅಮಾವಾಸ್ಯೆಯಂದು ಆರಂಭಗೊಳ್ಳುವ ಹಬ್ಬ ಮೂರು ದಿನ ನಡೆಯುತ್ತದೆ. ಅಮಾವಾಸ್ಯೆಯ ದಿನ ಗ್ರಾಮದಲ್ಲಿ ಹಿರಿಯರ ಪೂಜೆ ನಡೆಯಲಿದೆ. ಹೆಣ್ಣು ಮಕ್ಕಳು ತಮ್ಮ ತಾಂಡಗಳ ಸುತ್ತಮುತ್ತಲು ಇರುವ ಕಾಡಿಗೆ ತೆರಳಿ ಅಲ್ಲಿ ಸಿಗುವ ಕಾಡು ಹೂಗಳನ್ನು ಸಂಗ್ರಹಿಸಿ ತಾಂಡಾದ ಮುಂದೆ ಬರುತ್ತಾರೆ.ಸಗಣಿಯಿಂದ ಬೆನಕ ಸ್ಥಾಪಿಸಿ ತಾವು ತಂದ ಹೂಗಳಿಂದ ಸಿಂಗರಿಸುತ್ತಾರೆ. ಸಂಜೆ ದೀಪಗಳನ್ನು ಹಿಡಿದು ಮನೆಗಳ ಮುಂದೆ ತೆರಳಿ ತಾವು ಸ್ಥಾಪಿಸಿದ್ದ ಬೆನಕನಿಗೆ ದೀಪ ಬೆಳಗಿ ನಂತರ ಮನೆಯೊಳಗೆ ತೆರಳಿ ದೇವರ ಕೋಣೆಯಲ್ಲಿ ಆರತಿ ಸಲ್ಲಿಸಿ ಕುಟುಂಬದ ಎಲ್ಲರ ಹೆಸರು ಹೇಳಿ ಪದ ಕಟ್ಟಿ ಹಾಡಿ ಶುಭ ಹಾರೈಸುತ್ತಾರೆ.ಅದೇ ದಿನ ಬಲಿದಾನ ನೀಡಿದ ಕುರಿಯ ಅಂಗವನ್ನು ತೆಗೆದು ಸುಟ್ಟು ಅದನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಗ್ರಾಮದ ನಾಲ್ಕು ದಿಕ್ಕುಗಳಲ್ಲಿ ಗಾಳಿಯಲ್ಲಿ ತೂರಿ ಬರುವುದು ವಾಡಿಕೆ. ಉಳಿದ ಮಾಂಸವನ್ನು ಎಲ್ಲ ಕುಟುಂಬದವರು ಪಾಲು ಮಾಡಿಕೊಂಡು ಅದನ್ನು ನೈವೇದ್ಯವಾಗಿ ಬಳಸುವುದು ಪದ್ಧತಿ. ಇದಕ್ಕೆ ‘ಸೊಳೈ’ ಎನ್ನುವ ಹೆಸರಿದೆ.ಹಬ್ಬದ ದಿನ ಗ್ರಾಮದ ಎಲ್ಲ ಹೆಣ್ಣು ಮಕ್ಕಳು ಬಣ್ಣ ಬಣ್ಣದ ಬಟ್ಟೆ ಧರಿಸಿ ‘ಮೆರಾ’ ಆಚರಣೆ ಅಂಗವಾಗಿ ಮನೆ ಮನೆಗೆ ತೆರಳಿ ದೀಪ ಬೆಳಗಿ ಶುಭ ಕೋರುತ್ತಾರೆ. ನಂತರ ಗ್ರಾಮದ ಪ್ರತಿ ಮನೆಯವರು ಪ್ರೀತಿಯಿಂದ ಉಡುಗೊರೆ ಕೊಡುವ ಆಚರಣೆಯಿದೆ.ಹಬ್ಬದ ಮರುದಿನ ಮನೆ ಮನೆಗಳ ಮುಂದೆ ದೇವರನ್ನು ಒಯ್ದು ಸಿಂಗರಿಸಿ ಪೂಜಿಸುವುದು ಹಬ್ಬದ ರಿವಾಜು.ಇನ್ನು ಗ್ರಾಮದ ಪ್ರತಿ ಮನೆಯ ಮುಂದೆ ‘ಭೋಗ್’ ಆಚರಣೆ ಅಂಗ ವಾಗಿ ಹಾಲು, ಅನ್ನ, ತುಪ್ಪ ಬೆರೆಸಿ ದೇವತೆಗಳು ಮತ್ತು ಹಿರಿಯರಿಗೆ ಹೋಮದ ರೀತಿಯಲ್ಲಿ ಆಹುತಿ ಸಲ್ಲಿಸುವುದು ನಡೆದು ಬಂದಿದೆ. ಈ ಆಚರಣೆಯನ್ನು ಹಬ್ಬ ಯಾವ ದಿನವೇ ಬಂದರೂ ಕೂಡ ಶನಿವಾರ ಮಾತ್ರ ಆಚರಿಸಲಾಗುವುದು ಎನ್ನುತ್ತಾರೆ ತಾಂಡದ ಜನ.ಮನೆ ಮನೆಗೆ ಜ್ಯೋತಿಶೃಂಗೇರಿ: ಶೃಂಗೇರಿ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ದೀಪಾವಳಿಯನ್ನು ವಿವಿಧ ರೀತಿಯ ಸಂಪ್ರದಾಯದೊಂದಿಗೆ ಆಚರಿಸುತ್ತಾರೆ. ಅದರಲ್ಲೂ ಹುಲಿ ಕುಣಿತ, ವಿವಿಧ ದೇವತೆಗಳ ವೇಷವನ್ನು ಧರಿಸಿ ಪ್ರತಿ ಅಂಗಡಿ ಮತ್ತು ಮನೆಗಳಿಗೆ ತೆರಳಿ ಗಿರಿಜನರು ತಮ್ಮ ಪ್ರತಿಭೆ ಪ್ರದರ್ಶಿಸುತ್ತಾರೆ. ಕಿಗ್ಗಾ ಭಾಗದಲ್ಲಿ ಮನೆ ಮನೆಗೆ ತೆರಳಿ ಜ್ಯೋತಿ ನೀಡುತ್ತಾರೆ. ಮಲೆನಾಡಿನ ಒಕ್ಕೂಲು ಮನೆತನದವರು ಹಾಸ್ಯ ಮತ್ತು ಸಮಾಜಕ್ಕೆ ಮಾದರಿಯಾಗುವ ವಿಚಾರಗಳನ್ನು ನಾಟಕದ ರೂಪದಲ್ಲಿ ತೋರಿಸುವ ಅಂಟಿಗೆ ಪಿಂಟಿಗೆ ಎಂಬ ಸಾಂಪ್ರದಾಯಿಕ ಕಾರ್ಯಕ್ರಮ ನಡೆಸುತ್ತಾರೆ.ಕೇದಿಗೆ ಹಾಕುವ ಸಂಪ್ರದಾಯಮೂಡಿಗೆರೆ: ಮಲೆನಾಡಿನಲ್ಲಿ ಕನಿಷ್ಠ ಮೂರು ದಿನಗಳ ಕಾಲ ದೀಪಾವಳಿ ಆಚರಿಸಲಾಗುತ್ತದೆ. ಹಬ್ಬದ ಮೊದಲ ದಿನ ಕೇಜಿಗೆ(ಕೇದಿಗೆ) ಹಾಕುವ ಸಂಪ್ರದಾಯ ರೂಢಿಯಲ್ಲಿದೆ. ನದಿ ಹರಿಯುವ ಪ್ರದೇಶದಲ್ಲಿ ಬೆಳೆಯುವ ಮುಳ್ಳಿನ ಕೇದಿಗೆ ಜತೆಗೆ ಕಬ್ಬನ್ನು ಮನೆ, ಜಮೀನು, ಕಚೇರಿ, ನಿವೇಶನ, ನೀರಿನ ಟ್ಯಾಂಕ್ ಸೇರಿ ಎಲ್ಲಾ ಕಡೆಗಳಿಗೂ ಹಾಕಲಾಗುತ್ತದೆ. 2ನೇ ದಿನದಂದು ನೀರು ತುಂಬುವ ಸಂಪ್ರದಾಯವನ್ನು ನಡೆಸಲಾಗುತ್ತದೆ. ಕಡೆಯ ದಿನದಂದು ದೀಪಾವಳಿ ನಡೆಸಿ ಸಂಭ್ರಮಿಸಲಾಗುತ್ತದೆ.ಪೂರಕ ಮಾಹಿತಿ: ಎನ್.ಸೋಮಶೇಖರ್, ರವಿ ಕೆಳಂಗಡಿ, ಕೆ.ನಾಗರಾಜ್, ರವಿಕುಮಾರ್ ಶೆಟ್ಟಿಹಡ್ಲು, ಕೆ.ಎನ್.ರಾಘವೇಂದ್ರ261109-126-1848510454
