ಚೀನಾದ ಸ್ಪೈ ಮಹಿಳೆ ಜೊತೆ ವಿವಾಹೇತರ ಸಂಬಂಧ – ಎನ್ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ವಿರುದ್ಧ ತನಿಖೆಗೆ ಆದೇಶ
– ದಾಂಪತ್ಯ ದ್ರೋಹ ಬಗೆದಿದ್ದೇನೆ, ನನ್ನ ತಪ್ಪಿಗೆ ಕ್ಷಮೆಯಿಲ್ಲ; ಹುವಾಂಗ್ ವಿಷಾದ ಬೀಜಿಂಗ್: ಎನ್ವಿಡಿಯಾ (Nvidia) ಕಂಪನಿಯ ಸಿಇಒ ಜೆನ್ಸನ್ ಹುವಾಂಗ್ (Jensen Huang) ಅವರು ಚೀನಾದ ಉದ್ಯಮಿ ಆಲಿಸ್ ಹುವಾಂಗ್ ಅವರೊಂದಿಗಿನ ವಿವಾಹೇತರ ಸಂಬಂಧದ ಬಗ್ಗೆ ಪತ್ನಿ ಹಾಗೂ ಮಕ್ಕಳಲ್ಲಿ ಕ್ಷಮೆಯಾಚಿಸಿದ್ದಾರೆ. ಆಲಿಸ್ ಹುವಾಂಗ್ ಅವರು ಚೀನಾ ಸರ್ಕಾರದ ಪರವಾಗಿ ಬೇಹುಗಾರಿಕೆ ನಡೆ

– ದಾಂಪತ್ಯ ದ್ರೋಹ ಬಗೆದಿದ್ದೇನೆ, ನನ್ನ ತಪ್ಪಿಗೆ ಕ್ಷಮೆಯಿಲ್ಲ; ಹುವಾಂಗ್ ವಿಷಾದ ಬೀಜಿಂಗ್: ಎನ್ವಿಡಿಯಾ (Nvidia) ಕಂಪನಿಯ ಸಿಇಒ ಜೆನ್ಸನ್ ಹುವಾಂಗ್ (Jensen Huang) ಅವರು ಚೀನಾದ ಉದ್ಯಮಿ ಆಲಿಸ್ ಹುವಾಂಗ್ ಅವರೊಂದಿಗಿನ ವಿವಾಹೇತರ ಸಂಬಂಧದ ಬಗ್ಗೆ ಪತ್ನಿ ಹಾಗೂ ಮಕ್ಕಳಲ್ಲಿ ಕ್ಷಮೆಯಾಚಿಸಿದ್ದಾರೆ. ಆಲಿಸ್ ಹುವಾಂಗ್ ಅವರು ಚೀನಾ ಸರ್ಕಾರದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದರೆಂಬ ಶಂಕೆ ವ್ಯಕ್ತವಾದ ಹಿನ್ನೆಲೆ ಈ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಆರೋಪಗಳ ಬೆನ್ನಲ್ಲೇ ಎನ್ವಿಡಿಯಾ ಕಂಪನಿಯ ಆಡಳಿತ ಮಂಡಳಿ ಸ್ವತಂತ್ರ ತನಿಖೆಗೆ ಮುಂದಾಗಿದೆ. 63 ವರ್ಷದ ಜೆನ್ಸನ್ ಹುವಾಂಗ್ ತಮ್ಮ ತಪ್ಪನ್ನ ಒಪ್ಪಿಕೊಂಡಿದ್ದು, ತಮ್ಮ ನಡೆ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ಹೇಳಿದ್ದಾರೆ. ಕಂಪನಿಯ ಉದ್ಯೋಗಿಗಳಿಗೆ ಕಳುಹಿಸಿದ ಸಂದೇಶದಲ್ಲಿ, ʻನಾನು ಮಾಡಿದ ಕೆಲಸಕ್ಕೆ ಯಾವುದೇ ಕ್ಷಮೆಯಿಲ್ಲ. ಇದಕ್ಕಾಗಿ ನಾನು ಹೃತ್ಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆʼ ಎಂದು ಕೂಡ ತಿಳಿಸಿದ್ದಾರೆ. ಅಲ್ಲದೆ, ಕಂಪನಿಯ ಉದ್ಯೋಗಿಗಳು, ಆಡಳಿತ ಮಂಡಳಿ ಹಾಗೂ ಷೇರುದಾರರ ಮೇಲಿನ ತಮ್ಮ ಜವಾಬ್ದಾರಿಯನ್ನ ಸರಿಯಾಗಿ ನಿರ್ವಹಿಸುವಲ್ಲಿ ವಿಫವಾಗಿದ್ದೇನೆ. ಈ ಘಟನೆಯಿಂದ ಕಳೆದುಕೊಂಡಿರುವ ವಿಶ್ವಾಸವನ್ನ ಮರಳಿ ಗಳಿಸಲು ಸಂಪೂರ್ಣ ಜವಾಬ್ದಾರಿ ವಹಿಸುವುದಾಗಿ ಭರವಸೆ ನೀಡಿದ್ದಾರೆ. ಈ ಬೆನ್ನಲ್ಲೇ ಪ್ರಕರಣದ ಕುರಿತು ಸ್ವತಂತ್ರ ತನಿಖೆ ನಡೆಸಲು ಎನ್ವಿಡಿಯಾ ಆಡಳಿತ ಮಂಡಳಿ ನಿರ್ಧರಿಸಿದೆ. ಸ್ವತಂತ್ರ ನಿರ್ದೇಶಕರ ಸಮಿತಿಯ ಮೇಲ್ವಿಚಾರಣೆಯಲ್ಲಿ ಹೊರಗಿನ ಕಾನೂನು ತಜ್ಞರ ನೆರವಿನೊಂದಿಗೆ ತನಿಖೆ ನಡೆಯಲಿದೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಜೆನ್ಸನ್ ಹುವಾಂಗ್ ಒಪ್ಪಿಕೊಂಡಿದ್ದಾರೆ. ರಾಷ್ಟ್ರೀಯ ಭದ್ರತೆ ಅಥವಾ ಎನ್ವಿಡಿಯಾದ ರಹಸ್ಯ ಮಾಹಿತಿಗೆ ಧಕ್ಕೆಯಾಗಿದೆ ಎಂಬುದಕ್ಕೆ ಪ್ರಸ್ತುತ ಯಾವುದೇ ಕಾರಣ, ಆಧಾರ ಕಾಣುತ್ತಿಲ್ಲ. ಆದರೂ ಲಭ್ಯವಿರುವ ಎಲ್ಲ ಮಾಹಿತಿಗಳನ್ನ ತನಿಖೆಯ ವ್ಯಾಪ್ತಿಗೆ ಒಳಪಡಿಸಲಾಗುವುದು ಎಂದು ಕಂಪನಿಯ ಆಡಳಿತ ಮಂಡಳಿ ತಿಳಿಸಿದೆ. ಅಮೆರಿಕದ ರಾಷ್ಟ್ರೀಯ ಹಾಗೂ ಆರ್ಥಿಕ ಭದ್ರತೆಯನ್ನ ರಕ್ಷಿಸುವುದು ಕಂಪನಿಯ ಪ್ರಮುಖ ಆದ್ಯತೆಯಾಗಿದೆ ಎಂದು ಸ್ಪಷ್ಟಪಡಿಸಿದೆ. ಚೀನಾ ಪರ ಬೇಹುಗಾರಿಕೆ ಆರೋಪ ದಿ ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ ವರದಿ ಬಳಿಕ ಈ ವಿವಾದ ಮುನ್ನೆಲೆಗೆ ಬಂದಿದೆ. ಅಮೆರಿಕದ ಗುಪ್ತಚರ ಅಧಿಕಾರಿಗಳು ಆಲಿಸ್ ಹುವಾಂಗ್ ಅವರು ಚೀನಾ ಸರ್ಕಾರದ ಪರವಾಗಿ ಗುಪ್ತಚರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಾಧ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆಲಿಸ್ ಹುವಾಂಗ್ ಅವರು ಜೆನ್ಸನ್ ಹುವಾಂಗ್ ಅವರ ಸಂಬಂಧಿಕರಲ್ಲ. ಈ ಹಿಂದೆ ಅವರು ಸಿಂಗಾಪುರ ಮೂಲದ ಡೇಟಾ ಸೆಂಟರ್ ಕಂಪನಿ ಮೆಗಾಸ್ಪೀಡ್ (Megaspeed) ಜೊತೆ ಸಂಬಂಧ ಹೊಂದಿದ್ದರು. ಅಮೆರಿಕದ ರಫ್ತು ನಿರ್ಬಂಧಗಳನ್ನ ಉಲ್ಲಂಘಿಸಿ, ಚೀನಾಕ್ಕೆ ಅತ್ಯಾಧುನಿಕ ಎಐ (AI) ಚಿಪ್ಗಳನ್ನ ತಲುಪಿಸಲು ಮೆಗಾಸ್ಪೀಡ್ ನೆರವು ನೀಡಿರಬಹುದು ಎಂಬ ಶಂಕೆಯೂ ಈ ಹಿಂದೆ ವ್ಯಕ್ತವಾಗಿತ್ತು. ಕಳೆದ ವರ್ಷವೇ ಆಲಿಸ್ ಹುವಾಂಗ್ ಅವರು ಚೀನಾದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿಯನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತಿಳಿಸಲಾಗಿತ್ತು. ಈ ಆರೋಪಗಳ ಹಿನ್ನೆಲೆ ಅಮೆರಿಕದ ಸಂಸದರೂ ಎನ್ವಿಡಿಯಾ ಮುಖ್ಯಸ್ಥರಿಂದ ಸ್ಪಷ್ಟನೆ ಕೇಳಿದ್ದಾರೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಆತಂಕಗಳನ್ನ ಉಲ್ಲೇಖಿಸಿರುವ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ಹಿರಿಯ ರಿಪಬ್ಲಿಕನ್ ಸದಸ್ಯರು, ಈ ತಿಂಗಳಲ್ಲೇ ಜೆನ್ಸನ್ ಹುವಾಂಗ್ ಅವರು ಕಾಂಗ್ರೆಸ್ ಮುಂದೆ ಮಾಹಿತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
