ಮೈಸೂರು | ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿ vs ಬಿಜೆಪಿ – ಕಾರ್ಯಕರ್ತನಿಗೆ ಕೊಲೆ ಬೆದರಿಕೆ ಆರೋಪ
ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಹೆಸರನ್ನು ಬಿಜೆಪಿ (BJP) ಸಮಾವೇಶದ ಸ್ವಾಗತ ಭಾಷಣದಲ್ಲಿ ಉಲ್ಲೇಖಿಸದ ವಿಚಾರ ಇದೀಗ ಮೈಸೂರಿನ ಬಿಜೆಪಿಯಲ್ಲಿ ಮತ್ತೊಂದು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಸಮಾವೇಶದ ವೇಳೆ ಗಲಾಟೆ ಮಾಡಿದ್ದ ಬಿಜೆಪಿ ಕಾರ್ಯಕರ್ತನಿಗೆ ಮಾಜಿ ಶಾಸಕ ಹಾಗೂ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಬೆಂಬಲಿಗರು ಕೊಲೆ ಬೆದರಿಕೆ ಹಾಕಿದ್ದಾರೆ ಎ

ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಹೆಸರನ್ನು ಬಿಜೆಪಿ (BJP) ಸಮಾವೇಶದ ಸ್ವಾಗತ ಭಾಷಣದಲ್ಲಿ ಉಲ್ಲೇಖಿಸದ ವಿಚಾರ ಇದೀಗ ಮೈಸೂರಿನ ಬಿಜೆಪಿಯಲ್ಲಿ ಮತ್ತೊಂದು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಸಮಾವೇಶದ ವೇಳೆ ಗಲಾಟೆ ಮಾಡಿದ್ದ ಬಿಜೆಪಿ ಕಾರ್ಯಕರ್ತನಿಗೆ ಮಾಜಿ ಶಾಸಕ ಹಾಗೂ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಬೆಂಬಲಿಗರು ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಿಜೆಪಿ ಕಾರ್ಯಕರ್ತ ಡಿ.ಎಲ್ ರಾಜಚಾರಿ ಈ ಆರೋಪ ಮಾಡಿದ್ದು, ಈ ಸಂಬಂಧ ನಾಲ್ವರು ವ್ಯಕ್ತಿಗಳ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಡಿ. 6ರಂದು ನಗರದ ಟೌನ್ಹಾಲ್ ಆವರಣದಲ್ಲಿ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ’ ಎಂಬ ಸಂದೇಶದೊಂದಿಗೆ ಬಿಜೆಪಿ ವತಿಯಿಂದ ಬೃಹತ್ ಸಮಾವೇಶ ಹಾಗೂ ಪಾದಯಾತ್ರೆ ಆಯೋಜಿಸಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸ್ವಾಗತ ಭಾಷಣ ಮಾಡಿದ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಪಕ್ಷದ ಹಲವು ನಾಯಕರ ಹೆಸರುಗಳನ್ನ ಸ್ತಾಪಿಸಿ ಸ್ವಾಗತಿಸಿದರೂ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹೆಸರನ್ನ ಉಲ್ಲೇಖಿಸಿರಲಿಲ್ಲ. ಆಗ ವೇದಿಕೆಯ ಮುಂಭಾಗಕ್ಕೆ ಬಂದ ಬಿಜೆಪಿ ಕಾರ್ಯಕರ್ತ ರಾಜಚಾರಿ, ಪ್ರತಾಪ್ ಸಿಂಹ ಹೆಸರನ್ನ ಹೇಳುವಂತೆ ಒತ್ತಾಯಿಸಿ ಗಲಾಟೆ ಮಾಡಿದ್ದರು. ಪರಿಸ್ಥಿತಿ ನಿಯಂತ್ರಿಸಲು ಮುಂದಾದ ಪೊಲೀಸರು ರಾಜಚಾರಿಯನ್ನು ವೇದಿಕೆಯಿಂದ ಹೊರಗೆ ಕಳುಹಿಸಿದ್ದರು. ಆದರೆ ಸಮಾವೇಶ ಮುಗಿದ ಬಳಿಕವೂ ಈ ವಿವಾದ ತಣ್ಣಗಾಗಿಲ್ಲ. ಮೈಸೂರು ವಿಮಾನ ನಿಲ್ದಾಣದ ಬಳಿ ರಾಜಚಾರಿಯನ್ನ ಅಡ್ಡಗಟ್ಟಿದ ನಾಗೇಂದ್ರ ಬೆಂಬಲಿಗರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೆ, ಕುಡಿದುಕೊಂಡು 2,000 ರೂಪಾಯಿ ಹಣ ಪಡೆದು ಗಲಾಟೆ ಮಾಡಿದ್ದಾಗಿ ಹೇಳುವಂತೆ ಒತ್ತಡ ಹೇರಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ ಎಂಬುದು ರಾಜಚಾರಿಯ ಆರೋಪ. ಈ ಹಿಂದೆ ಬಿಡುಗಡೆಯಾಗಿದ್ದ ವಿಡಿಯೋ ಕುರಿತು ಎರಡು ದಿನಗಳ ಬಳಿಕ ಸ್ಪಷ್ಟನೆ ನೀಡಿರುವ ರಾಜಚಾರಿ, `ನನಗೆ ಕುಡಿಯುವ ಅಭ್ಯಾಸವೇ ಇಲ್ಲ. ನಾಲ್ವರು ನಾಗೇಂದ್ರ ಬೆಂಬಲಿಗರು ನನ್ನನ್ನ ಹೆದರಿಸಿ, ಕೊಲೆ ಬೆದರಿಕೆ ಹಾಕಿ ಒತ್ತಡದ ಮೂಲಕ ವಿಡಿಯೋ ಮಾಡಿಸಿಕೊಂಡಿದ್ದಾರೆ. ಅವರ ಬೆದರಿಕೆಯಿಂದಾಗಿ ಕುಡಿದು ಹಣ ಪಡೆದು ಗಲಾಟೆ ಮಾಡಿದ್ದಾಗಿ ಹೇಳಬೇಕಾಯಿತು’ ಎಂದು ಆರೋಪಿಸಿದ್ದಾರೆ.
